ಇಸ್ರೇಲ್ ಆರೋಪ ತಳ್ಳಿಹಾಕಿದ ಗುಟೆರಸ್
ವಿಶ್ವಸಂಸ್ಥೆ: ಭದ್ರತಾ ಸಮಿತಿ ಸಭೆಯಲ್ಲಿ ತಾನು ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು ಸಮರ್ಥಿಸಿಕೊಂಡಿರುವುದಾಗಿ ಇಸ್ರೇಲ್ ಮಾಡಿರುವ ಆರೋಪವನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ತಳ್ಳಿಹಾಕಿದ್ದಾರೆ.
ನನ್ನ ಕೆಲವು ಹೇಳಿಕೆಗಳ ತಪ್ಪು ನಿರೂಪಣೆಯಿಂದ ಆಘಾತಗೊಂಡಿದ್ದೇನೆ. ನಾನು ಹಮಾಸ್ ಕೃತ್ಯಗಳನ್ನು ಸಮರ್ಥಿಸುತ್ತಿದ್ದೇನೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು ಗುಟೆರಸ್ ಹೇಳಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.
`ನನ್ನ ಹೇಳಿಕೆಯ ಕುರಿತ ತಪ್ಪು ನಿರೂಪಣೆಯನ್ನು ಸರಿಪಡಿಸುವುದು ಅತ್ಯಗತ್ಯ ಎಂದು ನಂಬಿದ್ದೇನೆ' ಎಂದು ಗುಟೆರಸ್ ಹೇಳಿದ್ದಾರೆ.
ಗಾಝಾದಲ್ಲಿ ನಡೆಸುತ್ತಿರುವ ಕಾರ್ಯಾಚರಣೆ ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಗುಟೆರಸ್ ಹೇಳಿದ್ದರು.`ಗಾಝಾದಲ್ಲಿ ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗುತ್ತಿದೆ. ಒಂದು ಮಾತನ್ನು ಸ್ಪಷ್ಟವಾಗಿ ಹೇಳುತ್ತೇನೆ.. ಯಾರು ಕೂಡಾ ಅಂತರಾಷ್ಟ್ರೀಯ ಮಾನವೀಯ ಕಾನೂನಿಗಿಂತ ಮಿಗಿಲಲ್ಲ' ಎಂದು ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆಯಲ್ಲಿ ಗುಟೆರಸ್ ಹೇಳಿದ್ದರು.
ಗಾಝಾ ಸಂಘರ್ಷಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಬೆಳವಣಿಗೆಗಳು:
► ಹಮಾಸ್ಗೆ ಬೆಂಬಲ ಸೂಚಿಸಿದ ಟರ್ಕಿ. ಹಮಾಸ್ ಭಯೋತ್ಪಾದಕ ಸಂಘಟನೆಯಲ್ಲ, ಅವರು ದೇಶಭಕ್ತರು. ಇಸ್ರೇಲ್ ಭಯೋತ್ಪಾದಕ ದೇಶ ಎಂದು ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ಡೋಗನ್ ಆರೋಪಿಸಿದ್ದಾರೆ.
► ಎರ್ಡೋಗನ್ ಹೇಳಿಕೆಯನ್ನು ನಾವು ತಿರಸ್ಕರಿಸುತ್ತೇವೆ. ಟರ್ಕಿ ಅಧ್ಯಕ್ಷರ ಪ್ರಚೋದನಾತ್ಮಕ ಹೇಳಿಕೆಯು ಜಗತ್ತು ವೀಕ್ಷಿಸುತ್ತಿರುವ ಭೀತಿಯನ್ನು ಬದಲಾಯಿಸದು ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ ಟೀಕಿಸಿದೆ.
► ಗಾಝಾದಲ್ಲಿ ಹಮಾಸ್ ಗುರಿಯಾಗಿಸಿ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಅಮೆರಿಕ ನಿರ್ದೇಶಿಸುತ್ತಿದೆ ಎಂದು ಇರಾನ್ನ ಪರಮೋಚ್ಛ ಮುಖಂಡ ಅಯತೊಲ್ಲ ಆಲಿ ಖಾಮಿನೈ ಬುಧವಾರ ಆರೋಪಿಸಿದ್ದಾರೆ.
► ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬೇಡಿ. ಈ ಯುದ್ಧ ವಿಸ್ತರಿಸುವುದನ್ನು ಅಮೆರಿಕ ಬಯಸುತ್ತಿಲ್ಲ ಎಂದು ಇರಾನ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಎಚ್ಚರಿಕೆ.