ಗುಂಡಿನ ದಾಳಿ | ಹೈಟಿ ಪ್ರಧಾನಿ ಪಾರು

Update: 2024-07-30 16:56 GMT

ಪೋರ್ಟ್ ಆ-ಪ್ರಿನ್ಸ್ : ಕ್ರಿಮಿನಲ್ ಗ್ಯಾಂಗ್ ನಡೆಸಿದ ಗುಂಡಿನ ದಾಳಿಯಲ್ಲಿ ಹೈಟಿಯ ಪ್ರಧಾನಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ರಾಜಧಾನಿ ಪೋರ್ಟ್ ಆಫ್ ಪ್ರಿನ್ಸ್‍ನಲ್ಲಿ ಕ್ರಿಮಿನಲ್ ಗ್ಯಾಂಗ್‍ಗಳ ನಿಯಂತ್ರಣದ ಪ್ರದೇಶದಲ್ಲಿರುವ ಆಸ್ಪತ್ರೆಗೆ ಪ್ರಧಾನಿ ಗ್ಯಾರಿ ಕೊನಿಲ್ ಭೇಟಿ ನೀಡಿ ಹೊರಬಂದಾಗ ಗುಂಡಿನ ದಾಳಿ ನಡೆದಿದೆ. ಹೈಟಿ ಪೊಲೀಸರು ಮತ್ತು ವಿಶ್ವಸಂಸ್ಥೆ ಬೆಂಬಲಿತ ಕೆನ್ಯಾ ಭದ್ರತಾ ಪಡೆಗಳ ಬೆಂಗಾವಲಿನಲ್ಲಿದ್ದ ಪ್ರಧಾನಿ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಆಸ್ಪತ್ರೆಯಿದ್ದ ಕಟ್ಟಡವು ಫೆಬ್ರವರಿ ಅಂತ್ಯದಿಂದ ಜುಲೈಯವರೆಗೆ ಕ್ರಿಮಿನಲ್ ಗ್ಯಾಂಗ್‍ನ ನಿಯಂತ್ರಣದಲ್ಲಿತ್ತು. ಜುಲೈ ಪ್ರಥಮ ವಾರದಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಕಟ್ಟಡವನ್ನು ಕ್ರಿಮಿನಲ್ ಗ್ಯಾಂಗ್‍ನ ಹಿಡಿತದಿಂದ ಮುಕ್ತಿಗೊಳಿಸಲಾಗಿತ್ತು. ಗುಂಡಿನ ದಾಳಿ ನಡೆದಾಗ ಹಲವು ಪೊಲೀಸರು ಬ್ಯಾರಿಕೇಡ್‍ನ ಮರೆಗೆ ಧಾವಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಾಜಧಾನಿ ಪೋರ್ಟ್ ಆ-ಪ್ರಿನ್ಸ್‍ನ 80% ಪ್ರದೇಶವನ್ನು ಕ್ರಿಮಿನಲ್ ಗ್ಯಾಂಗ್‍ಗಳು ನಿಯಂತ್ರಿಸುತ್ತಿವೆ. ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ನಲುಗಿರುವ ದೇಶಕ್ಕೆ ಸ್ಥಿರತೆ ತರುವ ಅಂತರಾಷ್ಟ್ರೀಯ ಪ್ರಯತ್ನದ ಭಾಗವಾಗಿ ಕೆನ್ಯಾದ ನೂರಾರು ಪೊಲೀಸ್ ಅಧಿಕಾರಿಗಳನ್ನು ಹೈಟಿ ರಾಜಧಾನಿಯಲ್ಲಿ ನಿಯೋಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News