ಹಮಾಸ್ ದಾಳಿ ಗಾಝಾದ ನಾಶಕ್ಕೆ ಸಮರ್ಥನೆಯಲ್ಲ: ರೆಡ್‌ ಕ್ರಾಸ್‌

Update: 2023-10-14 17:59 GMT

Photo: PTI 

ಜಿನೆವಾ: ಇಸ್ರೇಲ್ ಮೇಲಿನ ಹಮಾಸ್ ನ ಬೃಹತ್ ದಾಳಿಯು ಗಾಝಾ ಪಟ್ಟಿಯ ಅನಿಯಮಿತ ವಿನಾಶವನ್ನು ಸಮರ್ಥಿಸುವುದಿಲ್ಲ ಎಂದು ರೆಡ್‌ ಕ್ರಾಸ್‌ ಹೇಳಿದೆ.

ನೆಲದ ಮೇಲಿನ ಆಕ್ರಮಣಕ್ಕೆ ಸಜ್ಜುಗೊಂಡಿರುವ ಇಸ್ರೇಲ್ ಸೇನೆ ದಕ್ಷಿಣ ಪ್ರಾಂತಕ್ಕೆ ತೆರಳುವಂತೆ ಉತ್ತರಗಾಝಾ ಪಟ್ಟಿಯ ನಿವಾಸಿಗಳಿಗೆ ಎಚ್ಚರಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಇಂಟರ್ನ್ಯಾಷನಲ್ ಕಮಿಟಿ ಆಫ್ ದಿ ರೆಡ್‌ ಕ್ರಾಸ್‌(ಐಸಿಆರ್ಸಿ) ‘ಕಳೆದ ವಾರಾಂತ್ಯ ಇಸ್ರೇಲ್ ಅನುಭವಿಸಿದ ಭೀಕರ ದಾಳಿಯನ್ನು ಯಾವುದೂ ಸಮರ್ಥಿಸುವುದಿಲ್ಲ. ಕುಟುಂಬದ ಸದಸ್ಯರನ್ನು ಕಳೆದುಕೊಂಡಿರುವವರ ಸಂಕಟ, ಪ್ರೀತಿಪಾತ್ರರು ಒತ್ತೆಯಾಳುಗಳಾಗಿರುವುದರಿಂದ ಆತಂಕಕ್ಕೆ ಒಳಗಾದವರ ನೋವಿನ ಬಗ್ಗೆ ನಮಗೆ ಅರಿವಿದೆ. ಅವರ ತಕ್ಷಣ ಬಿಡುಗಡೆಗೆ ಮತ್ತು ಮಾನವೀಯ ಭೇಟಿಗೆ ಅವಕಾಶ ನೀಡಬೇಕೆಂಬ ನಮ್ಮ ಆಗ್ರಹವನ್ನು ಪುನರುಚ್ಚರಿಸುತ್ತೇವೆ. ಆದರೆ ಈ ದಾಳಿಯು ಗಾಝಾದ ಅನಿಯಮಿತ ವಿನಾಶಕ್ಕೆ ಸಮರ್ಥನೆಯಾಗದು. ಯುದ್ಧದ ವಿಧಾನ ಮತ್ತು ಯುದ್ಧದಲ್ಲಿ ಬಳಸುವ ಅಸ್ತ್ರಗಳಿಗೆ ಸಂಬಂಧಿಸಿದ ತಮ್ಮ ಕಾನೂನು ಬದ್ಧತೆಯನ್ನು ಯಾರೂ ಕಡೆಗಣಿಸಬಾರದು ಎಂದಿದೆ.

ಗಾಝಾ ಪಟ್ಟಿಗೆ ಆಹಾರ, ನೀರು, ವಿದ್ಯುತ್ ಪೂರೈಕೆಯನ್ನು ನಿರಾಕರಿಸಿ ಸಂಪೂರ್ಣ ದಿಗ್ಬಂಧನ ವಿಧಿಸಿರುವ ಇಸ್ರೇಲ್ ಅಧಿಕಾರಿಗಳು ತಕ್ಷಣ ಗಾಝಾ ನಗರದಿಂದ ಸ್ಥಳಾಂತರಗೊಳ್ಳುವಂತೆ ಅಲ್ಲಿನ ನಿವಾಸಿಗಳಿಗೆ ಗಡುವು ವಿಧಿಸಿರುವುದು ಅಂತರಾಷ್ಟ್ರೀಯ ಮಾನವೀಯ ಕಾನೂನಿಗೆ ಅನುಗುಣವಾಗಿಲ್ಲ. ಜನರು ತಮ್ಮ ಮನೆ ಬಿಟ್ಟು ತೆರಳುವಂತೆ ಮಿಲಿಟರಿ ಶಕ್ತಿಯು ಆದೇಶಿಸುವಾಗ ಆ ಪ್ರದೇಶದ ಜನತೆಗೆ ಆಹಾರ, ನೀರು ಸೇರಿದಂತೆ ಮೂಲಭೂತ ಸೌಕರ್ಯದ ಪೂರೈಕೆಯಾಗುವುದನ್ನು ಮತ್ತು ಕುಟುಂಬದ ಸದಸ್ಯರನ್ನು ಪ್ರತ್ಯೇಕಿಸದಿರುವುದನ್ನು ಖಚಿತ ಪಡಿಸಬೇಕಾಗುತ್ತದೆ. ಗಾಝಾದ ಜನರಿಗೆ ಎಲ್ಲಿಯೂ ಸುರಕ್ಷಿತ ಜಾಗವಿಲ್ಲ ಮತ್ತು ಯಾವ ಪ್ರದೇಶಕ್ಕೆ ಮುಂದಿನ ಹಂತದಲ್ಲಿ ದಾಳಿ ನಡೆಯಲಿದೆ ಎಂಬುದು ತಿಳಿದಿಲ್ಲ. ಹಲವರಿಗೆ ತಮ್ಮ ಮನೆಬಿಟ್ಟು ತೆರಳಲು ಸಾಧ್ಯವಾಗದು ಮತ್ತು ಅಂತರಾಷ್ಟ್ರೀಯ ಕಾನೂನಿನಡಿ ಎಲ್ಲಾ ನಾಗರಿಕರನ್ನೂ ರಕ್ಷಿಸುತ್ತದೆ. ಅಸಹಾಯಕ ನಿವಾಸಿಗಳಿಗೆ ತುರ್ತು ನೆರವು ಒದಗಿಸಲು ನಮ್ಮ ತಂಡ ಸಿದ್ಧವಿದೆ. ಆದರೆ ದಾಳಿ ನಿಂತರೆ ನಮ್ಮ ಕಾರ್ಯಾಚರಣೆಯನ್ನು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಬಹುದು ಎಂದು ಐಸಿಆರ್ಸಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News