ಗಾಝಾದಲ್ಲಿ ದೀರ್ಘ ಯುದ್ಧಕ್ಕೆ ಸಿದ್ಧ : ಹಮಾಸ್
ಗಾಝಾ : ಸುಮಾರು ಒಂದು ವರ್ಷದಿಂದ ನಡೆಯುತ್ತಿರುವ ಗಾಝಾ ಯುದ್ಧ ಇನ್ನಷ್ಟು ದೀರ್ಘಾವಧಿಗೆ ವಿಸ್ತರಿಸಿದರೂ ಇರಾನ್ ಬೆಂಬಲಿತ ಪ್ರಾದೇಶಿಕ ಮಿತ್ರರ ಬೆಂಬಲದಿಂದ ಇಸ್ರೇಲ್ ವಿರುದ್ಧದ ಹೋರಾಟವನ್ನು ಮುಂದುವರಿಸಲು ಹಮಾಸ್ ಶಕ್ತವಾಗಿದೆ ಎಂದು ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ ಹೇಳಿದ್ದಾರೆ.
ʼಸುದೀರ್ಘ ಯುದ್ಧವನ್ನು ನಡೆಸಲು ನಾವು ಸಿದ್ಧಗೊಂಡಿದ್ದೇವೆ' ಎಂದು ಇರಾನ್‍ನಲ್ಲಿ ಹತರಾದ ಹಮಾಸ್ ರಾಜಕೀಯ ವಿಭಾಗದ ವರಿಷ್ಠ ಇಸ್ಮಾಯೀಲ್ ಹಾನಿಯೆಹ್ ಸ್ಥಾನದಲ್ಲಿ ನೇಮಕಗೊಂಡಿರುವ ಸಿನ್ವರ್ ಯೆಮನ್‍ನ ತನ್ನ ಮಿತ್ರ ಹೌದಿ ಸಶಸ್ತ್ರ ಹೋರಾಟಗಾರರ ಗುಂಪಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ. ಗಾಝಾ, ಲೆಬನಾನ್, ಯೆಮನ್, ಇರಾಕ್ ಹಾಗೂ ಈ ಪ್ರದೇಶದ ಇತರೆಡೆ ಇರುವ ಇರಾನ್ ಬೆಂಬಲಿತ ಸಶಸ್ತ್ರ ಹೋರಾಟಗಾರರ ಗುಂಪುಗಳು ಶತ್ರುವಿನ ರಾಜಕೀಯ ಇಚ್ಛಾಶಕ್ತಿಯನ್ನು ಮುರಿಯಲಿವೆ. ನಿಮ್ಮ ಹಾಗೂ ಲೆಬನಾನ್ ಮತ್ತು ಇರಾಕ್‍ನಲ್ಲಿರುವ ಗುಂಪುಗಳ ಜತೆಗೆ ನಮ್ಮ ಸಂಯೋಜಿತ ಪ್ರಯತ್ನಗಳು ಶತ್ರುವಿಗೆ ಸೋಲುಂಟು ಮಾಡಲು ಶಕ್ತವಾಗಿದೆ ಎಂದು ಸಿನ್ವರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಮ್ಮ ಹಲವು ಹೋರಾಟಗಾರರು ಸಂಘರ್ಷದಲ್ಲಿ ಮೃತಪಟ್ಟರೂ ಅವರ ಸ್ಥಾನಕ್ಕೆ ಯುವ ಜನಾಂಗ ನೇಮಕಗೊಳ್ಳುತ್ತಿದೆ. ಕೆಲವು ನಷ್ಟಗಳು ಸಂಭವಿಸಿದರೂ ನಾವು ಹೋರಾಟ ಮುಂದುವರಿಸುವ ಸಾಮರ್ಥ್ಯ ಹೊಂದಿದ್ದೇವೆ ಎಂದು ಹಮಾಸ್‍ನ ಉನ್ನತ ಮುಖಂಡ ಒಸಾಮಾ ಹಮ್ದನ್‍ರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಲೆಬನಾನ್ ಮೂಲದ ಹಿಜ್ಬುಲ್ಲಾ ಕಳೆದ ಅಕ್ಟೋಬರ್ ನಿಂದಲೂ ಹಮಾಸ್ ಬೆಂಬಲಿಸಿ ಗಡಿ ಭಾಗದಲ್ಲಿ ಇಸ್ರೇಲ್ ಪಡೆಗಳೊಂದಿಗೆ ದೈನಂದಿನ ಗುಂಡಿನ ದಾಳಿ ನಡೆಸುತ್ತಿದೆ. `ನಮಗೆ ಯುದ್ಧಕ್ಕೆ ಹೋಗುವ ಉದ್ದೇಶವಿಲ್ಲ. ಆದರೆ ಇಸ್ರೇಲ್ ಯುದ್ಧಕ್ಕೆ ಮುಂದಾದರೆ ಎರಡೂ ಕಡೆಯವರಿಗೆ ಭಾರೀ ನಷ್ಟವಾಗಲಿದೆ' ಎಂದು ಹಿಜ್ಬುಲ್ಲಾ ಮುಖಂಡರು ಹೇಳಿದ್ದಾರೆ.
ಅಕ್ಟೋಬರ್ 7ರ ದಾಳಿಯನ್ನು ನಡೆಸಿದ ಹಮಾಸ್ ಈಗ ಗಾಝಾದಲ್ಲಿ ಮಿಲಿಟರಿ ರಚನೆಯಾಗಿ ಅಸ್ತಿತ್ವದಲ್ಲಿಲ್ಲ. ಹಮಾಸ್‍ಗೆ ಬೆಂಬಲ ನೀಡುತ್ತಿರುವ ಹಿಜ್ಬುಲ್ಲಾ ಸಂಘರ್ಷ ಅಂತ್ಯಗೊಳಿಸಲು ನಿರಾಕರಿಸುತ್ತಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಹೇಳಿದ್ದಾರೆ. ಈ ಮಧ್ಯೆ, ರಕ್ಷಣಾ ಸಚಿವ ಗ್ಯಾಲಂಟ್‍ರನ್ನು ಬದಲಾಯಿಸುವ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪರಿಗಣಿಸುತ್ತಿದ್ದಾರೆ ಎಂದು ವರದಿಯಾಗಿದೆ.