ಶ್ರೀಲಂಕಾ ಪ್ರಧಾನಿಯಾಗಿ ಹರಿಣಿ ಅಮರಸೂರ್ಯ ನೇಮಕ

Update: 2024-09-24 16:28 GMT

ಹರಿಣಿ ಅಮರಸೂರ್ಯ | PC : PTI

ಕೊಲಂಬೊ : ದ್ವೀಪರಾಷ್ಟ್ರ ಶ್ರೀಲಂಕಾದ ನೂತನ ಪ್ರಧಾನಿಯಾಗಿ ಹರಿಣಿ ಅಮರಸೂರ್ಯ ಮಂಗಳವಾರ ನೇಮಕಗೊಂಡಿದ್ದಾರೆ. ಸಿರಿಮಾವೊ ಬಂಡಾರನಾಯಕೆ ಬಳಿಕ ಶ್ರೀಲಂಕಾದ ಪ್ರಧಾನಿ ಸ್ಥಾನವನ್ನು ಆಲಂಕರಿಸಿದ ಮೊದಲ ಮಹಿಳೆಯೆಂಬ ಹೆಗ್ಗಳಿಕೆಗೆ ಹರಿಣಿ ಅವರು ಪಾತ್ರರಾಗಿದ್ದಾರೆ,.

ನ್ಯಾಶನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಪಕ್ಷದ ನಾಯಕಿಯಾದ 54 ವರ್ಷ ವಯಸ್ಸಿನ ಹರಿಣಿ ಅವರು ಮಂಗಳವಾರ ಬೆಳಗ್ಗೆ ಶ್ರೀಲಂಕಾದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.ಅವರಿಗೆ ನೂತನ ರಾಷ್ಟ್ರಾಧ್ಯಕ್ಷ ಅನುರಾ ಕುಮಾರ್ ದಿಸ್ಸಾನಾಯಕೆ ಅವರು ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ದಿಸ್ಸಾ ನಾಯಕೆ ಅವರು ತಾನು ಹಾಗೂ ಹರಿಣಿ ಅಮರ ಸೂರ್ಯ ಸೇರಿದಂತೆ ನಾಲ್ವರು ಸಚಿವರ ಸಂಪುಟವನ್ನು ರಚಿಸಿದ್ದಾರೆ.

ಹರಿಣಿ ಅವರಿಗೆ ನ್ಯಾಯಾಂಗ, ಶಿಕ್ಷಣ, ಕಾರ್ಮಿಕ, ಕೈಗಾರಿಕೆ, ವಿಜ್ಞಾನ ಹಾಗೂ ತಂತ್ರಜ್ಞಾನ ಹಾಗೂ ಹೂಡಿಕೆ ಖಾತೆಗಳನ್ನು ನೀಡಲಾಗಿದೆ. ನೂತನ ರಾಷ್ಟ್ರಾಧ್ಯಕ್ಷರಾಗಿ ದಿಸ್ಸಾನಾಯಕೆ ಆಯ್ಕೆಯಾದ ಬಳಿಕ ಹಾಲಿ ಪ್ರಧಾನಿ ದಿನೇಶ್ ಗುಣವರ್ಧನ ಅವರು ರಾಜೀನಾಮೆ ನೀಡಿದ್ದರು. ತೆರವಾದ ಸ್ಥಾನಕ್ಕೆ ಹರಿಣಿ ಅವರ ನೇಮಕವಾಗಿದೆ.

ಮಾನವಹಕ್ಕುಗಳ ಹೋರಾಟಗಾರ್ತಿ ಹಾಗೂ ವಿವಿ ಉಪನ್ಯಾಸಕಿಯಾದ ಹರಿಣಿ ಅವರು 1994ರಲ್ಲಿ ಸಿರಿಮಾವೊ ಬಂಡಾರನಾಯಿಕೆ ಪ್ರಧಾನಿಯಾದ ಬಳಿಕ ಆ ಹುದ್ದೆಯನ್ನು ಏರಿದ ಮೊದಲ ಮಹಿಳೆಯೆನಿಸಿದ್ದಾರೆ. ಜಯಸೂರ್ಯ ಅವರು ಶ್ರೀಲಂಕಾದ ಮೂರನೇ ಮಹಿಳಾ ಪ್ರಧಾನಿ.

ಇದೇ ಸಂದರ್ಭ ಎನ್‌ಪಿಪಿ ಸಂಸದರಾದ ವಿಜಿತಾ ಹೇರತ್ ಹಾಗೂ ಲಕ್ಷ್ಮಣ್ ನಿಪುನಾರಚ್ಚಿ ಅವರು ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಶೀಘ್ರದಲ್ಲೇ ಶ್ರೀಲಂಕಾ ಸಂಸತ್ ವಿಸರ್ಜನೆಯಾಗಲಿದ್ದು, ಅಲ್ಲಿಯವರೆಗೆ ಹಂಗಾಮಿ ಸಂಪುಟವಾಗಿ ಇದು ಕಾರ್ಯನಿರ್ವಹಿಸಲಿದೆ. ಶ್ರೀಲಂಕಾದ ನೂತನ ಸಂಸತ್ ಚುನಾವಣೆಯು ನವೆಂಬರ್‌ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ದಿಸ್ಸಾ ನಾಯಕೆ ಅವರು ಶ್ರೀಲಂಕಾದ 9ನೇ ಅಧ್ಯಕ್ಷರಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News