ಲೆಬನಾನ್ ಮೇಲೆ ಇಸ್ರೇಲ್ ದಾಳಿ: ಮಹಿಳೆಯರು, ಮಕ್ಕಳು ಸೇರಿ 492 ಮಂದಿ ಬಲಿ
ಲೆಬನಾನ್: ಲೆಬನಾನ್ ನಲ್ಲಿ ಹಿಜ್ಬುಲ್ಲಾ ನೆಲೆಗಳನ್ನು ಗುರಿ ಮಾಡಿ ಇಸ್ರೇಲ್ ನಡೆಸಿದ ದಾಳಿಯಲ್ಲಿ, 35 ಮಕ್ಕಳು ಸೇರಿದಂತೆ ಕನಿಷ್ಠ 492 ಜನರು ಸಾವನ್ನಪ್ಪಿದ್ದಾರೆ 1,645 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಲೆಬನಾನ್ ನ ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ದಾಳಿಗೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 492 ಜನರು ಸಾವನ್ನಪ್ಪಿದ್ದಾರೆ ಮತ್ತು 1,645 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 2006ರ ಇಸ್ರೇಲ್-ಹಿಜ್ಬುಲ್ಲಾ ಸಂಘರ್ಷದ ನಂತರ ದೇಶಕ್ಕೆ ಸೋಮವಾರ ಅತ್ಯಂತ ಮಾರಕ ದಿನವಾಗಿತ್ತು ಎಂದು ಹೇಳಿಕೊಂಡಿದೆ.
ಇಸ್ರೇಲ್ ದಾಳಿಗೆ ಪ್ರತಿಕಾರವಾಗಿ ಹಿಜ್ಬುಲ್ಲಾ ರಾಕೆಟ್ ದಾಳಿಗಳನ್ನು ನಡೆಸಿದೆ. ಉತ್ತರ ಇಸ್ರೇಲ್‌ನ ಹೈಫಾ, ಅಫುಲಾ, ನಜರೆತ್ ಮತ್ತು ಇತರ ನಗರಗಳಲ್ಲಿ ಇಸ್ರೇಲ್ ಮಿಲಿಟರಿ ನೆಲೆಗಳು ಮತ್ತು ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸಲಾಗಿದೆ.
ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು, ಇಸ್ರೇಲ್‌ನ ಯುದ್ಧವು ಲೆಬನಾನ್ ಜನರೊಂದಿಗೆ ಅಲ್ಲ, ಕ್ಷಿಪಣಿಗಳನ್ನು ಇಟ್ಟುಕೊಂಡಿರುವ ಹಿಜ್ಬುಲ್ಲಾ ಜೊತೆಯಾಗಿದೆ. ಇಸ್ರೇಲ್ ಜನರ ಸುರಕ್ಷತೆಗಾಗಿ ಶಸ್ತ್ರಾಸ್ತ್ರಗಳನ್ನು ನಾವು ವಶಕ್ಕೆ ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಇಸ್ರೇಲ್ ಮಿಲಿಟರಿ ಬೈರುತ್ ಮತ್ತು ಲೆಬನಾನ್‌ನ ಇತರ ಭಾಗಗಳಲ್ಲಿನ ಜನರಿಗೆ ತಮ್ಮ ಮನೆಗಳನ್ನು ತೊರೆಯುವಂತೆ ಮತ್ತು ಹಿಜ್ಬುಲ್ಲಾ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿಕೊಂಡಿರುವ ಕಟ್ಟಡಗಳಿಂದ ದೂರವಿರುವಂತೆ ಸೂಚಿಸಿತ್ತು. ಕಳೆದ ವಾರ ಲೆಬನಾನ್‌ನಾದ್ಯಂತ ಪೇಜರ್‌ಗಳು ಮತ್ತು ವಾಕಿ-ಟಾಕಿಗಳು ಸ್ಪೋಟಗೊಂಡು ಹಲವು ಮಂದಿ ಮೃತಪಟ್ಟಿದ್ದರು.