ರಶ್ಯದ - ಉಕ್ರೇನ್ ಯುದ್ಧದ ಅಂತ್ಯ ಸಮೀಪಿಸುತ್ತಿದೆ ಝೆಲೆನ್‌ಸ್ಕಿ
ವಾಶಿಂಗ್ಟನ್ : ರಶ್ಯದ ಜೊತೆಗೆ ಉಕ್ರೇನ್ ನಡೆಸುತ್ತಿರುವ ಯುದ್ಧವು ಕೊನೆಗೊಳ್ಳುವ ದಿನಗಳು ಹತ್ತಿರವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮಂಗಳವಾರ ಹೇಳಿದ್ದು, ಉಕ್ರೇನ್ ಸೇನೆಯನ್ನು ಬಲಪಡಿಸಲು ಸಹಕಾರ ನೀಡಬೇಕೆಂದು ಮಿತ್ರರಾಷ್ಟ್ರಗಳನ್ನು ಆಗ್ರಹಿಸಿದ್ದಾರೆ.
‘‘ನಾವು ಯೋಚಿಸುವುದಕ್ಕಿಂತಲೂ ವೇಗವಾಗಿ ಶಾಂತಿಯೆಡೆಗೆ ಮರಳುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ. ಯುದ್ಧವು ಕೊನೆಗೊಳ್ಳುವ ಸನಿಹದೆಡೆಗೆ ನಾವು ಸಾಗುತ್ತಿದ್ದೇವೆ. ನಾವು ಕೇವಲ ಬಲಿಷ್ಠರಾಗಿರಬೇಕಾಗಿದೆ’’ ಎಂದು ಝೆಲೆನ್‌ಸ್ಕಿ ಅವರು ಎಬಿಸಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಆದರೆ ರಶ್ಯ ಜೊತೆಗಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ತಾನು ಯಾವ ಯೋಜನೆಯನ್ನು ರೂಪಿಸಿದ್ದೇನೆಂಬ ಬಗ್ಗೆ ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಅವರು ನಿರಾಕರಿಸಿದರು. ಆದರೆ ಮಿತ್ರರಾಷ್ಟ್ರಗಳಿಂದ ತಾನು ಬೆಂಬಲವನ್ನು ನಿರೀಕ್ಷಿಸುತ್ತಿರುವುದಾಗಿ ಅವರು ಹೇಳಿದರು.
ಉಕ್ರೇನನ್ನು ಬಲಪಡಿಸುವುದೇ ಗೆಲುವನ್ನು ಸಾಧಿಸುವ ತಂತ್ರಗಾರಿಕೆಯಾಗಿದೆ. ಇದಕ್ಕೋಸ್ಕರವೇ ನಮ್ಮನ್ನು ಬಲಪಡಿಸಬೇಕೆಂದು ನಮ್ಮ ಸ್ನೇಹಿತರು, ನಮ್ಮ ಜೊತೆಗಾರರನ್ನು ನಾವು ಕೇಳಿಕೊಳ್ಲುತ್ತಿದ್ದೇವೆ ಎಂದವರು ಹೇಳಿದರು.