ಚೀನಾದಲ್ಲಿ ಭಾರೀ ಮಳೆ | 7 ಮಂದಿ ಮೃತ್ಯು ; ಮೂವರು ನಾಪತ್ತೆ
Update: 2024-07-30 17:08 GMT
ಬೀಜಿಂಗ್ : ಚೀನಾದ ಹುನಾನ್ ಪ್ರಾಂತದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಕನಿಷ್ಟ 7 ಮಂದಿ ಮೃತಪಟ್ಟಿದ್ದು ಮೂವರು ನಾಪತ್ತೆಯಾಗಿರುವುದಾಗಿ ಸರಕಾರಿ ಸ್ವಾಮ್ಯದ ಕ್ಸಿನ್‍ಹುವಾ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.
ಕಳೆದ ಬುಧವಾರ ಹುನಾನ್‍ನ ಯಾಂಗ್‍ಕ್ಸಿಂಗ್ ಕೌಂಟಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಮೂವರು ಒಂದು ವಾರದ ಬಳಿಕವೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರು ಮೃತಪಟ್ಟಿರುವುದು ದೃಢಪಟ್ಟಿದೆ. ಝಿಕ್ಸಿಂಗ್ ಪ್ರಾಂತದಲ್ಲಿ 4 ಮಂದಿ ಮೃತಪಟ್ಟಿದ್ದು ಮೂವರು ನಾಪತ್ತೆಯಾಗಿದ್ದಾರೆ. ಈ ಪ್ರಾಂತದಲ್ಲಿ ಒಂದೇ ದಿನ 645 ಮಿ.ಮೀ ದಾಖಲೆ ಮಟ್ಟದ ಮಳೆಯಾಗಿದ್ದು 11,000ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ. ಮಳೆಯಿಂದ 900 ಮನೆಗಳಿಗೆ ಹಾನಿಯಾಗಿದ್ದು 1,345 ರಸ್ತೆಗಳು ಕುಸಿದಿವೆ. ಸುಮಾರು 5,400 ರಕ್ಷಣಾ ಕಾರ್ಯಕರ್ತರನ್ನು ಶೋಧ ಮತ್ತು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ವರದಿ ಹೇಳಿದೆ.