ಚೀನಾದಲ್ಲಿ ನಡೆಯಲಿದೆ ಮಾನವ-ರೊಬೊಟ್ ಮ್ಯಾರಥಾನ್

Update: 2025-01-20 21:18 IST
ಚೀನಾದಲ್ಲಿ ನಡೆಯಲಿದೆ ಮಾನವ-ರೊಬೊಟ್ ಮ್ಯಾರಥಾನ್

ಸಾಂದರ್ಭಿಕ ಚಿತ್ರ | Pixabay

  • whatsapp icon

ಬೀಜಿಂಗ್: ಮಾನವ ಮತ್ತು ರೊಬೊಟ್ ಓಟಗಾರರನ್ನು ಒಳಗೊಂಡ ವಿಶ್ವದ ಮೊದಲ ಮ್ಯಾರಥಾನ್ ಅನ್ನು ಆಯೋಜಿಸುತ್ತಿರುವ ಚೀನಾ ಎಪ್ರಿಲ್‍ನಲ್ಲಿ ಐತಿಹಾಸಿಕ ಘಟನೆಗೆ ಸಜ್ಜಾಗಿದೆ.

ಬೀಜಿಂಗ್‍ನ ಡೇಕ್ಸಿಂಗ್ ಜಿಲ್ಲೆಯಲ್ಲಿ ನಿಗದಿಯಾಗಿರುವ ಹಾಫ್ ಮ್ಯಾರಥಾನ್‍ನ ರೋಮಾಂಚಕ 21 ಕಿ.ಮೀ ಓಟದಲ್ಲಿ 12,000 ಮಾನವ ಅಥ್ಲೆಟ್‍ಗಳು ಹಾಗೂ ಮಾನವನ ಗುಣಲಕ್ಷಣ ಹೊಂದಿರುವ ರೊಬೊಟ್‍ಗಳ ನಡುವೆ ಸ್ಪರ್ಧೆ ನಡೆಯಲಿದೆ. ಪ್ರಥಮ ಮೂರು ಸ್ಥಾನ ಪಡೆದವರು, ಮನುಷ್ಯರಾಗಿರಲಿ ಅಥವಾ ರೊಬೊಟ್‍ಗಳಾಗಿರಲಿ, ಬಹುಮಾನ ಪಡೆಯಲಿದ್ದಾರೆ ಎಂದು ಸ್ಪರ್ಧೆಯ ಆಯೋಜಕರನ್ನು ಉಲ್ಲೇಖಿಸಿ `ಸೌತ್ ಚೀನಾ ಮಾರ್ನಿಂಗ್ ಪೋಸ್ಟ್' ವರದಿ ಮಾಡಿದೆ.

`ಬೀಜಿಂಗ್ ಇಕನಾಮಿಕ್-ಟೆಕ್ನಲಾಜಿಕಲ್ ಡೆವಲಪ್‍ಮೆಂಟ್ ಏರಿಯಾ'ದ ಆಡಳಿತ ಮಂಡಳಿ ಆಯೋಜಿಸಿರುವ ಮ್ಯಾರಥಾನ್‍ನಲ್ಲಿ 20ಕ್ಕೂ ಹೆಚ್ಚು ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ರೊಬೊಟ್‍ಗಳು ಪಾಲ್ಗೊಳ್ಳಲಿವೆ. ರೊಬೊಟ್‍ಗಳು ಚಕ್ರಗಳನ್ನು ಬಳಸುವುದಕ್ಕಿಂತ ಹೆಚ್ಚಾಗಿ ಎರಡು ಕಾಲುಗಳ ಮೇಲೆ ನಡೆಯುವುದು, ಓಡುವುದು ಮುಂತಾದ ಚಲನೆಯನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವುದು ಸೇರಿದಂತೆ ಕೆಲವೊಂದು ಮಾನದಂಡಗಳನ್ನು ಪೂರೈಸಬೇಕು. ರಿಮೋಟ್ ನಿಯಂತ್ರಿತ ಮತ್ತು ಸಂಪೂರ್ಣ ಸ್ವಾಯತ್ತ ರೊಬೊಟ್‍ಗಳು ಸ್ಪರ್ಧಿಸಲು ಅರ್ಹವಾಗಿವೆ ಮತ್ತು ಅಗತ್ಯವಿದ್ದರೆ ಓಟದ ಸಮಯದಲ್ಲಿ ಬ್ಯಾಟರಿಗಳನ್ನು ಬದಲಾಯಿಸಲು ಅವಕಾಶ ನೀಡಲಾಗುತ್ತದೆ. ಬಹುನಿರೀಕ್ಷಿತ ಸ್ಪರ್ಧಿಗಳ ಪಟ್ಟಿಯಲ್ಲಿರುವ `ತಿಯಾಂಗಾಂಗ್' ರೊಬೊಟ್ ಗಂಟೆಗೆ 10 ಕಿ.ಮೀ ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿದ್ದು ಕಳೆದ ಬಾರಿಯ ಮ್ಯಾರಥಾನ್‍ನಲ್ಲಿ ಮಾನವ ಸ್ಪರ್ಧಿಗಳ ಸರಿಸಮಾನವಾಗಿ ಓಡಿ ಗಮನ ಸೆಳೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News