ಅಧಿಕಾರ ಹಸ್ತಾಂತರಕ್ಕೆ ಅಡ್ಡಿ: ಟ್ರಂಪ್ ವಿರುದ್ಧ ದೋಷಾರೋಪಣೆ
Update: 2023-08-02 18:03 GMT
ವಾಷಿಂಗ್ಟನ್: ಅಮೆರಿಕದಲ್ಲಿ 2020ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಬುಡಮೇಲುಗೊಳಿಸಲು ಪ್ರಯತ್ನಿಸಿದ ಆರೋಪದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಂಗಳವಾರ 4 ಕೌಂಟ್‌ಗಳ ದೋಷಾರೋಪಣೆ ಮಾಡಲಾಗಿದೆ.
ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಶಾಂತರೀತಿಯಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ತಡೆಯುವ ಪ್ರಯತ್ನವನ್ನು ಟ್ರಂಪ್ ನಡೆಸಿದ್ದರು. ಈ ಅಪರಾಧಕ್ಕೆ ಅವರನ್ನು ಹೊಣೆಯಾಗಿಸಬೇಕು ಎಂದು ಕೋರಿ ನ್ಯಾಯಾಂಗ ಇಲಾಖೆ ಅರ್ಜಿ ಸಲ್ಲಿಸಿತ್ತು.
ಅಧ್ಯಕ್ಷ ಜೋ ಬೈಡನ್ ಅವರ ಗೆಲುವನ್ನು ಪ್ರಮಾಣೀಕರಿಸದಂತೆ ಸಂಸತ್ ಅನ್ನು ತಡೆಯುವ ಮೂಲಕ ಮತ್ತು ಮತದಾರರ ನ್ಯಾಯಯುತ ಚುನಾವಣೆಯ ಹಕ್ಕನ್ನು ಕಸಿದುಕೊಳ್ಳಲು ಪ್ರಯತ್ನಿಸುವ ಮೂಲಕ ಟ್ರಂಪ್ ಅಮೆರಿಕವನ್ನು ವಂಚಿಸಲು ಸಂಚು ರೂಪಿಸಿದ್ದಾರೆ ಎಂದು ದೋಷಾರೋಪಣೆಯಲ್ಲಿ ಉಲ್ಲೇಖಿಸಲಾಗಿದೆ.
ಗುರುವಾರ ಫೆಡರಲ್ ನ್ಯಾಯಾಲಯದಲ್ಲಿ ಪ್ರಾಥಮಿಕ ವಿಚಾರಣೆಗೆ ಹಾಜರಾಗುವಂತೆ ಟ್ರಂಪ್‌ಗೆ ನ್ಯಾಯಾಲಯ ಸೂಚಿಸಿದೆ.