ಪಕ್ಷದ ಆಂತರಿಕ ಚುನಾವಣೆ ನಡೆಸುವುದಾಗಿ ಇಮ್ರಾನ್ ಘೋಷಣೆ
ಇಸ್ಲಮಾಬಾದ್: ಫೆಬ್ರವರಿ 5ರಂದು ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಆಂತರಿಕ ಚುನಾವಣೆಯನ್ನು ನಡೆಸುವುದಾಗಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದ್ದಾರೆ.
ಪಕ್ಷದ ಆಂತರಿಕ ಚುನಾವಣೆಯನ್ನು ನಿಗದಿತ ಅವಧಿಯೊಳಗೆ ನಡೆಸುವಂತೆ ಕಳೆದ ವರ್ಷ ಚುನಾವಣಾ ಆಯೋಗ ಸೂಚಿಸಿತ್ತು. ಅದರಂತೆ ಪಿಟಿಐ ಪಕ್ಷದ ಆಂತರಿಕ ಚುನಾವಣೆ ನಡೆದು ಪದಾಧಿಕಾರಿಗಳ ಹೆಸರನ್ನು ಪ್ರಕಟಿಸಲಾಗಿತ್ತು. ಆದರೆ ಪಕ್ಷದ ಕೆಲವು ಭಿನ್ನಮತೀಯ ಸದಸ್ಯರು ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರಿಂದ ಚುನಾವಣೆಯನ್ನು ಅಸಿಂಧುಗೊಳಿಸಲಾಗಿತ್ತು.
ಈ ಕಾರಣದಿಂದ ಇಮ್ರಾನ್ ಪಕ್ಷದ `ಕ್ರಿಕೆಟ್ ಬ್ಯಾಟ್' ಚಿಹ್ನೆಯನ್ನು ಚುನಾವಣಾ ಆಯೋಗ ರದ್ದುಗೊಳಿಸಿತ್ತು. ಫೆಬ್ರವರಿ 8ರಂದು ನಿಗದಿಯಾಗಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಿಟಿಐ ಪಕ್ಷ ತನ್ನ ಅಭ್ಯರ್ಥಿಗಳನ್ನು ಪಕ್ಷೇತರರಾಗಿ ಕಣಕ್ಕಿಳಿಸಿದೆ. ಇದೀಗ ದಿಢೀರನೆ ಆಂತರಿಕ ಚುನಾವಣೆಯ ದಿನಾಂಕವನ್ನು ಪಕ್ಷ ಘೋಷಿಸಿದೆ. ಜನವರಿ 31ರವರೆಗೆ ನೋಂದಣಿ ಮಾಡಿಕೊಂಡಿರುವ ಎಲ್ಲಾ ಸದಸ್ಯರೂ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಇಚ್ಛೆಯ ಅಭ್ಯರ್ಥಿಗಳಿಗೆ ಮತ ಚಲಾಯಿಸಬಹುದು ಎಂದು ಪಕ್ಷದ ಹೇಳಿಕೆ ತಿಳಿಸಿದೆ.