ಇಮ್ರಾನ್ ಆಪ್ತ ಖುರೇಷಿ ಚುನಾವಣೆ ಸ್ಪರ್ಧೆಗೆ ಅನರ್ಹ

Update: 2024-02-04 16:28 GMT

ಇಸ್ಲಮಾಬಾದ್: ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ನಿಕಟವರ್ತಿ ಶಾ ಮಹ್ಮೂದ್ ಖುರೇಷಿ 5 ವರ್ಷ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಪಾಕಿಸ್ತಾನದ ಚುನಾವಣಾ ಆಯೋಗ ಆದೇಶಿಸಿದೆ.

ಪಾಕಿಸ್ತಾನದಲ್ಲಿ ಫೆಬ್ರವರಿ 8ರಂದು ನಿಗದಿಯಾಗಿರುವ ಸಾರ್ವತ್ರಿಕ ಚುನಾವಣೆಗೆ 5 ದಿನಗಳಿರುವಂತೆಯೇ ಚುನಾವಣಾ ಆಯೋಗ ಇಮ್ರಾನ್‍ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಪ್ರಮುಖ ಮುಖಂಡ ಖುರೇಷಿಯನ್ನು ಸ್ಪರ್ಧೆಯಿಂದ ಅನರ್ಹಗೊಳಿಸಿ ಇಮ್ರಾನ್ ಖಾನ್‍ಗೆ ಮತ್ತೊಂದು ಆಘಾತ ನೀಡಿದೆ. ಸೈಫರ್ ಪ್ರಕರಣ(ಸರಕಾರದ ರಹಸ್ಯವನ್ನು ಬಹಿರಂಗಪಡಿಸಿರುವುದು)ದಲ್ಲಿ ವಿಶೇಷ ನ್ಯಾಯಾಲಯ ಈ ವಾರದ ಆರಂಭದಲ್ಲಿ ಇಮ್ರಾನ್ ಖಾನ್ ಹಾಗೂ ಮಹ್ಮೂದ್ ಖುರೇಷಿಗೆ ತಲಾ 10 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಇದನ್ನು ಉಲ್ಲೇಖಿಸಿರುವ ಚುನಾವಣಾ ಆಯೋಗ `ಪಾಕಿಸ್ತಾನದ ಸಂವಿಧಾನ ಹಾಗೂ ಕಾನೂನಿನ ಪ್ರಕಾರ, ಶಿಕ್ಷೆಗೊಳಗಾದ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. 2024ರ ಜನವರಿ 30ರಂದು ವಿಶೇಷ ನ್ಯಾಯಾಲಯ ಖುರೇಷಿಗೆ 10 ವರ್ಷ ಜೈಲುಶಿಕ್ಷೆ ಘೋಷಿಸಿದೆ. ಆದ್ದರಿಂದ ಸಂವಿಧಾನದ 63(1)(ಎಚ್)ಪರಿಚ್ಛೇದದ ಪ್ರಕಾರ ಖುರೇಷಿ ಅನರ್ಹಗೊಂಡಿದ್ದು 2024ರ ಸಾರ್ವತ್ರಿಕ ಚುನಾವಣೆ ಸೇರಿದಂತೆ ಮುಂದಿನ 5 ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಂಡಿದ್ದಾರೆ' ಎಂದು ಹೇಳಿದೆ. ಇದಕ್ಕೂ ಮುನ್ನ, ಇಮ್ರಾನ್ ಖಾನ್‍ರನ್ನೂ 5 ವರ್ಷ ಚುನಾವಣೆ ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿದೆ.

ಫೆಬ್ರವರಿ 8ರಂದು ನಿಗದಿಯಾಗಿರುವ ಸಾರ್ವತ್ರಿಕ ಚುನಾವಣೆಯಲ್ಲಿ ನವಾಝ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಝ್(ಪಿಎಂಎಲ್) ಪಕ್ಷ, ಬಿಲಾವಲ್ ಭುಟ್ಟೋ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ಮತ್ತು ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ ಎಂದು `ಡಾನ್' ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News