ಬಲೂಚಿಸ್ತಾನ ಹಿಂಸಾಚಾರಕ್ಕೆ ಇಮ್ರಾನ್ ಸರಕಾರದ ತಪ್ಪುಗಳೇ ಕಾರಣ : ಪಾಕ್ ಸರಕಾರದ ಆರೋಪ

Update: 2024-09-08 14:36 GMT

ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ | PC : X/@MIshaqDar50 

ಇಸ್ಲಾಮಾಬಾದ್ : ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಸ್ವಾಧೀನಕ್ಕೆ ಸಂಬಂಧಿಸಿದ ಈ ಹಿಂದಿನ ಇಮ್ರಾನ್‍ಖಾನ್ ಸರಕಾರದ ತಪ್ಪು ನಡೆಗಳೇ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದಲ್ಲಿ ಹಿಂಸಾಚಾರ ಹೆಚ್ಚಲು ಮತ್ತು ಭದ್ರತಾ ವೈಫಲ್ಯಕ್ಕೆ ಪ್ರಮುಖ ಕಾರಣ ಎಂದು ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು `2021ರಲ್ಲಿ ಒಂದು ಕಪ್ ಚಹಾ ಕುಡಿಯಲಿಕ್ಕಾಗಿ ನಮ್ಮ 3 ಸ್ಟಾರ್ ಜನರಲ್ (ಸೇನೆಯ ಕಮಾಂಡರ್) ಅಫ್ಘಾನ್ ರಾಜಧಾನಿ ಕಾಬೂಲ್‍ಗೆ ತೆರಳಿದ್ದರು. ಅವರು ಕುಡಿದ ಆ ಒಂದು ಕಪ್ ಚಹಾದ ಬೆಲೆಯನ್ನು ದೇಶ ಈಗ ತೆರಬೇಕಾಗಿದೆ' ಎಂದರು. ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ ಒಂದು ವಾರದ ಬಳಿಕ ಪಾಕಿಸ್ತಾನದ ಮಾಜಿ ಐಎಸ್‍ಐ ಮುಖ್ಯಸ್ಥ ಲೆ|ಜ| ಫಯಾಜ್ ಹಮೀದ್ ಕಾಬೂಲ್‍ಗೆ ಭೇಟಿ ನೀಡಿದ್ದರು.

ಅಫ್ಘಾನಿಸ್ತಾನದಲ್ಲಿ ಅಮೆರಿಕ ಬೆಂಬಲದ ಅಶ್ರಫ್ ಘನಿ ಸರಕಾರದ ವಿರುದ್ಧ ಹೋರಾಡಲು ಬಿಡುಗಡೆಗೊಳಿಸಲಾದ `ಉಗ್ರಗಾಮಿಗಳು' ಈಗ ಬಲೂಚಿಸ್ತಾನದಲ್ಲಿ ನಡೆಯುವ ಭಯೋತ್ಪಾದನೆಯ ಹಿಂದಿರುವ ಶಕ್ತಿಗಳಾಗಿದ್ದಾರೆ' ಎಂದು ದಾರ್ ಹೇಳಿರುವುದಾಗಿ `ದಿ ಡಾನ್' ವರದಿ ಮಾಡಿದೆ.

ಕಾಬೂಲ್‍ಗೆ ಭೇಟಿ ನೀಡುವಾಗ ಲೆ| ಹಮೀದ್ ಆಗಿನ ಪ್ರಧಾನಿ ಇಮ್ರಾನ್ ಖಾನ್ ಅವರ ಅನುಮತಿ ಪಡೆದಿರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ದಾರ್ ` ಪ್ರಧಾನಿಯ ಅನುಮತಿಯಿಲ್ಲದೆ ಅವರು ತೆರಳಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲು ನನಗೆ ಕಷ್ಟವಾಗುತ್ತದೆ. ಇಂತಹ ವಿಷಯಗಳು ಪ್ರಧಾನಿಯ ಅನುಮತಿಯಿಲ್ಲದೆ ನಡೆಯಲು ಸಾಧ್ಯವಿಲ್ಲ' ಎಂದರು.

ಈ ಮಧ್ಯೆ, ವಿವರವಾದ ತನಿಖೆಯ ಬಳಿಕ ಲೆ| ಜ| ಫಯಾಜ್ ಹಮೀದ್ ವಿರುದ್ಧ ಕೋರ್ಟ್ ಮಾರ್ಷಲ್ ಪ್ರಕ್ರಿಯೆ ಆರಂಭವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News