ಗಾಝಾದಲ್ಲಿ ಶಾಂತಿ ನೆಲೆಸಲು ಭಾರತ ಪ್ರಮುಖ ಪಾತ್ರ ವಹಿಸಬೇಕು : ಇರಾನ್ ಒತ್ತಾಯ
ಟೆಹ್ರಾನ್: ಇರಾನ್ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಂಗಳವಾರ ಅಧ್ಯಕ್ಷ ಇಬ್ರಾಹಿಂ ರೈಸಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ಇರಾನ್-ಭಾರತ ಒಪ್ಪಂದಗಳ ಕ್ಷಿಪ್ರ ಅನುಷ್ಟಾನ ಹಾಗೂ ವಿಳಂಬವನ್ನು ಸರಿದೂಗಿಸುವ ಬಗ್ಗೆ ವಿಸ್ತ್ರತ ಚರ್ಚೆ ನಡೆಸಲಾಗಿದೆ ಎಂದು ಇರಾನ್‍ನ ಮಾಧ್ಯಮಗಳು ವರದಿ ಮಾಡಿವೆ.
`ಗಾಝಾದಲ್ಲಿ ಇಸ್ರೇಲ್ ಆಡಳಿತ ನಡೆಸುತ್ತಿರುವ ಅಪರಾಧಗಳು ಯುದ್ಧಾಪರಾಧ ಮತ್ತು ಮನುಕುಲದ ವಿರುದ್ಧದ ಅಪರಾಧಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಅಧ್ಯಕ್ಷರು ವಿವರಿಸಿದರು. ಮತ್ತು ಗಾಝಾದ ಮೇಲಿನ ದಾಳಿಯನ್ನು ತಡೆಯುವುದು, ಯೆಹೂದಿ ಆಡಳಿತ(ಇಸ್ರೇಲ್) ಅನ್ನು ಶಿಕ್ಷಿಸುವುದು ಮತ್ತು ಫೆಲೆಸ್ತೀನ್ ಜನತೆಯ ಹಕ್ಕುಗಳನ್ನು ಪೂರ್ಣಗೊಳಿಸಿದರೆ ಮಾತ್ರ ಈ ಪ್ರದೇಶದಲ್ಲಿ ಸ್ಥಿರತೆ ಮತ್ತು ಭದ್ರತೆ ಮರುಸ್ಥಾಪನೆಯಾಗಲಿದೆ. ಬಾಂಬ್‍ದಾಳಿಯನ್ನು ಅಂತ್ಯಗೊಳಿಸಲು, ಗಾಝಾ ಪ್ರದೇಶದ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಲು ಮತ್ತು ಫೆಲೆಸ್ತೀನಿಯನ್ ಜನರ ಹಕ್ಕುಗಳಿಗೆ ಮಾನ್ಯತೆ ಲಭಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸುವ ಅಗತ್ಯವಿದೆ' ಎಂದು ಒತ್ತಾಯಿಸಿರುವುದಾಗಿ ಇರಾನ್‍ನ ರಾಯಭಾರಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಇರಾನ್-ಭಾರತ ನಡುವಿನ ಆಳವಾಗಿ ಬೇರೂರಿದ ಸಂಬಂಧವನ್ನು ಒತ್ತಿಹೇಳಿದ ಅಧ್ಯಕ್ಷರು ಚಬಹರ್ ಬಂದರು ಅಭಿವೃದ್ಧಿ ಯೋಜನೆ ಸೇರಿದಂತೆ ಉಭಯ ದೇಶಗಳ ನಡುವಿನ ಒಪ್ಪಂದಗಳ ಅನುಷ್ಟಾನಕ್ಕೆ ವೇಗ ನೀಡುವ ಮತ್ತು ವಿಳಂಬವನ್ನು ಸರಿದೂಗಿಸುವ, ರಾಜಕೀಯ, ಆರ್ಥಿಕ, ವಿಜ್ಞಾನ ಮತ್ತು ತಂತ್ರಜ್ಞಾನ, ಸಾರಿಗೆ ಮತ್ತು ಇಂಧನ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಂಬಂಧಗಳ ಮಟ್ಟವನ್ನು ಸುಧಾರಿಸುವ ಅಗತ್ಯದ ಬಗ್ಗೆ ಉಲ್ಲೇಖಿಸಿದರು ಎಂದು ವರದಿ ಹೇಳಿದೆ.
ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧವನ್ನು ಎದುರಿಸುವ ಕ್ಷೇತ್ರದಲ್ಲಿ ಎರಡು ದೇಶಗಳ ಸಾಮಾನ್ಯ ದೃಷ್ಟಿಕೋನದ ಮಹತ್ವದ ಬಗ್ಗೆ ಚರ್ಚೆ ನಡೆದಿದೆ. ಅಫ್ಘಾನಿಸ್ತಾನದಲ್ಲಿ ಸ್ಥಿರತೆ ಮತ್ತು ಭದ್ರತೆಯನ್ನು ಸ್ಥಾಪಿಸಲು ಸಹಕಾರದ ಅಗತ್ಯ, ಅಂತರಾಷ್ಟ್ರೀಯ ವ್ಯಾಪಾರವನ್ನು ಬಲಪಡಿಸುವುದು(ವಿಶೇಷವಾಗಿ ರಾಷ್ಟ್ರೀಯ ಕರೆನ್ಸಿಗಳ ಮೂಲಕ), ಮತ್ತು ಅಂತರಾಷ್ಟ್ರೀಯ ಸಮುದ್ರಯಾನದ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಉಭಯ ಮುಖಂಡರು ವಿಸ್ತ್ರತ ಚರ್ಚೆ ನಡೆಸಿದರು ಎಂದು ವರದಿ ಹೇಳಿದೆ.
ಸಭೆಯ ಬಳಿಕ ಮಾತನಾಡಿದ ಎಸ್. ಜೈಶಂಕರ್ ಚಬಹರ್ ಬಂದರು ಅಭಿವೃದ್ಧಿ ಯೋಜನೆಯಲ್ಲಿ ಭಾರತ ತನ್ನ ಬದ್ಧತೆಗಳಿಗೆ ಸಂಪೂರ್ಣ ಬದ್ಧವಾಗಿದೆ ಮತ್ತು ಇರಾನ್‍ನೊಂದಿಗಿನ ಸಹಕಾರದ ಸಮಗ್ರ ಅಭಿವೃದ್ಧಿಯ ಮಹತ್ವವನ್ನು ಒತ್ತಿಹೇಳಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.