ಗ್ರೀಸ್‍ನಲ್ಲಿ ತೀವ್ರಗೊಂಡ ಕಾಡ್ಗಿಚ್ಚು | ಓರ್ವ ಮೃತ್ಯು, ವ್ಯಾಪಕ ನಾಶ-ನಷ್ಟ

Update: 2024-08-13 16:25 GMT

ಸಾಂದರ್ಭಿಕ ಚಿತ್ರ

ಅಥೆನ್ಸ್, ಆ.13: ಗ್ರೀಕ್‍ನಲ್ಲಿ ತೀವ್ರಗತಿಯಲ್ಲಿ ಹರಡುತ್ತಿರುವ ಕಾಡ್ಗಿಚ್ಚು ಮಂಗಳವಾರ ಐತಿಹಾಸಿಕ ನಗರ ಅಥೆನ್ಸ್ ಹೊರವಲಯದ ಹೆಚ್ಚಿನ ಅರಣ್ಯಪ್ರದೇಶ ಹಾಗೂ ಜನವಸತಿ ಪ್ರದೇಶಗಳನ್ನು ಸುಟ್ಟುಹಾಕಿದ್ದು ವಾಯುಮಾಲಿನ್ಯದಿಂದಾಗಿ ಜನತೆ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.

ಈ ವರ್ಷ ಗ್ರೀಸ್‍ನಲ್ಲಿ ಸಂಭವಿಸಿರುವ ಅತ್ಯಂತ ವಿನಾಶಕಾರಿ ಕಾಡ್ಗಿಚ್ಚು ಸುಮಾರು 22,600 ಎಕರೆ ಪ್ರದೇಶವನ್ನು ಸುಟ್ಟುಹಾಕಿರುವುದನ್ನು ಆಗಸ್ಟ್ 12ರಂದು ಉಪಗ್ರಹ ಚಿತ್ರಗಳು ತೋರಿಸಿವೆ. ನಂತರದ ಎರಡು ದಿನಗಳಲ್ಲಿ ಇನ್ನಷ್ಟು ಪ್ರದೇಶಗಳು ಬೆಂಕಿಗೆ ಆಹುತಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಥೆನ್ಸ್‍ನಿಂದ ಈಶಾನ್ಯಕ್ಕೆ ಸುಮಾರು 35 ಕಿ.ಮೀ ದೂರದಲ್ಲಿರುವ ಮ್ಯಾರಥಾನ್ ಸರೋವರದ ಬಳಿ ರವಿವಾರ ಕಾಣಿಸಿಕೊಂಡಿದ್ದ ಕಾಡ್ಗಿಚ್ಚು ಪೆಂಡೆಲಿ ಪರ್ವತ ಪ್ರದೇಶದ ಮೂಲಕ ಸಾಗಿ ಅಥೆನ್ಸ್‍ನ ಉತ್ತರದಲ್ಲಿರುವ ನಗರಗಳತ್ತ ಮುಂದುವರಿದಿದ್ದು ಹಲವು ಮನೆಗಳು, ಅಂಗಡಿ, ಸಂಸ್ಥೆಗಳನ್ನು ಸುಟ್ಟುಹಾಕಿದೆ. ಹೆಲಿಕಾಪ್ಟರ್‍ಗಳ ನೆರವಿನಿಂದ ಬೆಂಕಿಯನ್ನು ನಿಯಂತ್ರಿಸಲು ನೂರಾರು ಅಗ್ನಿಶಾಮಕ ದಳದ ಸದಸ್ಯರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಅಥೆನ್ಸ್ ನಗರ ನಿವಾಸಿಗಳು ಹೊಗೆಯ ಕಾರ್ಮೋಡ ಮತ್ತು ಬೂದಿಯಿಂದ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದಾರೆ. ಅಥೆನ್ಸ್‍ನ ಸಮೀಪದ ವ್ರಿಲಿಸಿಯಾ ನಗರದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News