ಇಸ್ರೇಲ್ ಮೇಲೆ ಡ್ರೋನ್, ಕ್ಷಿಪಣಿ ಮಳೆಗರೆದ ಇರಾನ್: ಶನಿವಾರ ತಡರಾತ್ರಿ ನಡೆದ `ಆಪರೇಷನ್ ಟ್ರೂ' ಕಾರ್ಯಾಚರಣೆಯ ವಿವರ ಇಲ್ಲಿದೆ...
ಟೆಹ್ರಾನ್: ಸಿರಿಯಾದ ದಮಾಸ್ಕಸ್‍ನಲ್ಲಿ ಇರಾನ್ ದೂತಾವಾಸದ ಮೇಲೆ ನಡೆದ ದಾಳಿಗೆ ಪ್ರತೀಕಾರ ಕೈಗೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದ ಇರಾನ್ ಶನಿವಾರ ತಡರಾತ್ರಿ ಇಸ್ರೇಲ್ ಮೇಲೆ ಡ್ರೋನ್ ಹಾಗೂ ಕ್ಷಿಪಣಿಗಳ ಮಳೆಗರೆದಿದೆ ಎಂದು ವರದಿಯಾಗಿದೆ.
ರಾಜತಾಂತ್ರಿಕ ಕಚೇರಿಯ ಮೇಲಿನ ದಾಳಿ ಸೇರಿದಂತೆ ಹಲವಾರು ಅಪರಾಧಗಳಿಗೆ ಪ್ರತಿಯಾಗಿ ಆಕ್ರಮಿತ ಪ್ರದೇಶದ(ಇಸ್ರೇಲ್) ಮೇಲೆ ಇರಾನ್‍ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(IRGC) ದಾಳಿ ನಡೆಸಿದೆ ಎಂದು ಇರಾನ್ ಪ್ರತಿಕ್ರಿಯಿಸಿದೆ.
ಇಸ್ರೇಲ್ ಮತ್ತು ಇರಾನ್ ನಡುವೆ 1979ರಿಂದಲೂ ಮನಸ್ತಾಪ ಹೊಗೆಯಾಡುತ್ತಿದ್ದರೂ, ಇಸ್ರೇಲ್ ಮೇಲೆ ಇರಾನ್ ನಡೆಸಿರುವ ಮೊತ್ತಮೊದಲ ನೇರ ದಾಳಿ ಇದಾಗಿದೆ. `ಆಪರೇಷನ್ ಟ್ರೂ' ಎಂದು ಹೆಸರಿಸಲಾದ ಕಾರ್ಯಾಚರಣೆಯಲ್ಲಿ ಇಸ್ರೇಲ್‍ನ ನಿರ್ಧಿಷ್ಟ ಗುರಿಯತ್ತ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿರುವುದಾಗಿ IRGC ಪ್ರತಿಪಾದಿಸಿದೆ. ರವಿವಾರ ಬೆಳಿಗ್ಗೆ ಸುಮಾರು 2 ಗಂಟೆಗೆ ಪ್ರಥಮ ಹಂತದ ಕ್ಷಿಪಣಿ ದಾಳಿ ನಡೆದಿದ್ದು ಆಕಾಶದಲ್ಲಿ ಹಲವೆಡೆ ಸ್ಫೋಟ ನಡೆದಿದೆ. ಇಸ್ರೇಲ್‍ನಾದ್ಯಂತ ಸೈರನ್ ಮೊಳಗಿಸಲಾಗಿದ್ದು ಜೆರುಸಲೇಮ್, ವಾಣಿಜ್ಯ ಕೇಂದ್ರ ಟೆಲ್‍ಅವೀವ್ ಹಾಗೂ ಇಸ್ರೇಲ್‍ನ ಪರಮಾಣು ರಿಯಾಕ್ಟರ್ ಇರುವ ಡಿಮೋನಾ ನಗರಗಳು ದಾಳಿಯ ಗುರಿಗಳಾಗಿದ್ದವು. ಇಸ್ರೇಲ್‍ನ ನೆಲೆಗಳಿಗೆ ಅಲ್ಪಮಟ್ಟಿನ ಹಾನಿಯಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇರಾನ್‍ನ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ವರದಿ ಮಾಡಿದೆ.
ಸುಮಾರು 300ರಷ್ಟು ಡ್ರೋನ್, ಕ್ಷಿಪಣಿ ದಾಳಿ ನಡೆದಿದ್ದು ಇದರಲ್ಲಿ ಬಹುತೇಕ ದಾಳಿಯನ್ನು ತುಂಡರಿಸಲಾಗಿದೆ. ಬೆರಳೆಣಿಕೆಯಷ್ಟು ಕ್ಷಿಪಣಿ ಇಸ್ರೇಲ್ ಭೂಮಿಗೆ ಅಪ್ಪಳಿಸಿದ್ದು ಒಂದು ಮಗು ಗಾಯಗೊಂಡಿರುವ ವರದಿಯಿದೆ ಎಂದು ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ವಕ್ತಾರ ಅವಿಚೆಯ್ ಅದ್ರೇಯ್ ಹೇಳಿದ್ದಾರೆ.
ಭದ್ರತಾ ಮಂಡಳಿ ತುರ್ತು ಸಭೆ:
ಇಸ್ರೇಲ್ ಮೇಲಿನ ಇರಾನ್ ದಾಳಿಯ ಬಗ್ಗೆ ಚರ್ಚಿಸಲು ರವಿವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆ ನಡೆಯಲಿದೆ. ಇರಾನ್‍ನ ದಾಳಿಯನ್ನು ಭದ್ರತಾ ಮಂಡಳಿ ಸರ್ವಾನುಮತದಿಂದ ಖಂಡಿಸಬೇಕು ಮತ್ತು ಇಸ್ಲಾಮಿಕ್ ರೆವೊಲ್ಯುಷನರಿ ಗಾಡ್ರ್ಸ್ ಅನ್ನು ಭಯೋತ್ಪಾದಕ ಸಂಸ್ಥೆಯೆಂದು ಘೋಷಿಸುವಂತೆ ಇಸ್ರೇಲ್ ಒತ್ತಾಯಿಸಿದೆ.
ದಾಳಿಗೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಗಳು
► ನಮ್ಮ ಕಾರ್ಯಾಚರಣೆ ಮುಗಿದಿದ್ದು ಇದನ್ನು ಮುಂದುವರಿಸುವ ಉದ್ದೇಶವಿಲ್ಲ. ಇಸ್ರೇಲ್‍ನ 2 ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿದ ದಾಳಿ ಯಶಸ್ವಿಯಾಗಿದೆ. ಇರಾನ್‍ನ ಹಿತಾಸಕ್ತಿ, ಸಿಬಂದಿಗಳು ಅಥವಾ ಪ್ರಜೆಗಳ ಮೇಲೆ ಇಸ್ರೇಲ್ ದಾಳಿ ನಡೆಸಿದರೆ ಇನ್ನಷ್ಟು ತೀವ್ರ ಪ್ರತಿದಾಳಿ ನಡೆಯಲಿದೆ ಎಂದು ಇರಾನ್ ಸಶಸ್ತ್ರ ಪಡೆಯ ಮುಖ್ಯಸ್ಥರು ಘೋಷಿಸಿದ್ದಾರೆ.
► ಇರಾನ್‍ನ ಪ್ರತೀಕಾರ ದಾಳಿಯ ಬಗ್ಗೆ `ಬೇಜವಾಬ್ದಾರಿಯ ನಿಲುವು' ತಳೆದಿರುವ ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಯ ರಾಯಭಾರಿಗಳನ್ನು ಕರೆಸಿಕೊಂಡು ಪ್ರಶ್ನಿಸಲಾಗಿದೆ ಎಂದು ಇರಾನ್‍ನ ವಿದೇಶಾಂಗ ಇಲಾಖೆ ಹೇಳಿದೆ.
► ಇಸ್ರೇಲ್ ನೆಲೆಗಳ ಮೇಲೆ ಇರಾನ್ ನಡೆಸಿದ ಮಿಲಿಟರಿ ಕಾರ್ಯಾಚರಣೆ ವಿಶ್ವಸಂಸ್ಥೆಯ ಸನದು(ಚಾರ್ಟರ್)ನ 51ನೇ ವಿಧಿಯಲ್ಲಿ ಉಲ್ಲೇಖಿಸಲಾದ `ಕಾನೂನುಬದ್ಧ ರಕ್ಷಣೆಯ ಹಕ್ಕಿನ' ವ್ಯಾಪ್ತಿಯಡಿ ಬರುತ್ತದೆ ಎಂದು ಇರಾನ್ ಹೇಳಿದೆ.
► ಇಸ್ರೇಲ್ ನಡೆಸುವ ಪ್ರತಿದಾಳಿಗೆ ಅಮೆರಿಕದ ಬೆಂಬಲವಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸ್ಪಷ್ಟಪಡಿಸಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ದೂರವಾಣಿಯಲ್ಲಿ ಮಾತನಾಡಿದ ಬೈಡನ್ `ಯಾವುದೇ ಪ್ರತಿದಾಳಿಯನ್ನು ಅಮೆರಿಕ ವಿರೋಧಿಸುತ್ತದೆ' ಎಂಬ ಸಂದೇಶ ರವಾನಿಸಿದ್ದಾರೆ ಎಂದು ವರದಿಯಾಗಿದೆ.
► ಇರಾನ್ 170 ಡ್ರೋನ್‍ಗಳು, 30ಕ್ಕೂ ಅಧಿಕ ಕ್ರೂಸ್ ಕ್ಷಿಪಣಿಗಳು, 120ಕ್ಕೂ ಅಧಿಕ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಆದರೆ ಇದರಲ್ಲಿ 99%ದಷ್ಟನ್ನು ತುಂಡರಿಸಲಾಗಿದೆ. ಕೆಲವು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಇಸ್ರೇಲ್ ಪ್ರದೇಶವನ್ನು ತಲುಪಿದ್ದು ಸೇನಾನೆಲೆಗೆ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಇಸ್ರೇಲಿ ಸೇನೆಯ ವಕ್ತಾರ ಡೇನಿಯಲ್ ಹಗಾರಿ ಹೇಳಿದ್ದಾರೆ.
► ಇಸ್ರೇಲ್-ಇರಾನ್ ನಡುವಿನ ಹಗೆತನದ ಉಲ್ಬಣವು ಈ ಪ್ರದೇಶದಲ್ಲಿನ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆಯಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಇಸ್ರೇಲ್‍ನಲ್ಲಿನ ಭಾರತೀಯ ದೂತಾವಾಸ, ಶಾಂತವಾಗಿರುವಂತೆ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಿದೆ.
► ಪರಿಸ್ಥಿತಿ ಉಲ್ಬಣಿಸುತ್ತಿರುವ ಬಗ್ಗೆ ಚೀನಾ, ಬ್ರಿಟನ್, ಯುರೋಪಿಯನ್ ಯೂನಿಯನ್, ಸೌದಿ ಅರೆಬಿಯಾ ಕಳವಳ ಸೂಚಿಸಿವೆ.