ಗಾಝಾ ಶಿಬಿರದ ಮೇಲೆ ಇಸ್ರೇಲ್ ದಾಳಿ | ಕನಿಷ್ಠ 21 ಮಂದಿ ಮೃತ್ಯು
ಗಾಝಾ: ಗಾಝಾದಲ್ಲಿ ಸ್ಥಳಾಂತರಗೊಂಡ ಫೆಲೆಸ್ತೀನೀಯರು ಆಶ್ರಯ ಪಡೆದಿದ್ದ ಶಿಬಿರ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 21 ಮಂದಿ ಸಾವನ್ನಪ್ಪಿದ್ದು ಇತರ 28 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಗಾಝಾದ ಕರಾವಳಿ ಪ್ರದೇಶ ಮವಾಸಿಯಲ್ಲಿ ಮಾನವೀಯ ವಲಯ ಎಂದು ಇಸ್ರೇಲ್ ಹೆಸರಿಸಿದ್ದ ಪ್ರದೇಶದ ಮೇಲೆಯೇ ದಾಳಿ ನಡೆದಿದೆ ಎಂದು ಗಾಝಾ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ. ಈ ಪ್ರದೇಶದಲ್ಲಿ ಹಮಾಸ್ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ದಾಳಿಯ ಬಳಿಕ ಸ್ಫೋಟ ಸಂಭವಿಸಿದ್ದು ಇದು ಈ ಪ್ರದೇಶದಲ್ಲಿ ಹಮಾಸ್ ನೆಲಬಾಂಬ್‍ಗಳನ್ನು ಹುಗಿದಿರಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ಇದಕ್ಕೂ ಮುನ್ನ ಬುಧವಾರ ರಾತ್ರಿ ಗಾಝಾದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 4 ಮಕ್ಕಳ ಸಹಿತ 8 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಈ ಮಧ್ಯೆ, ಬುಧವಾರ ಗಾಝಾದಲ್ಲಿ ಓರ್ವ ಒತ್ತೆಯಾಳುವಿನ ಮೃತದೇಹವನ್ನು ಪತ್ತೆಹಚ್ಚಲಾಗಿದೆ ಎಂದು ಇಸ್ರೇಲ್ ಸೇನೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.