ಲೆಬನಾನ್‍ನಲ್ಲಿ ಇಸ್ರೇಲ್‍ನ ಭೂ ಕಾರ್ಯಾಚರಣೆ ಆರಂಭ | ದಕ್ಷಿಣ ಲೆಬನಾನ್ ಪ್ರವೇಶಿಸಿದ ಟ್ಯಾಂಕ್‍ಗಳು

Update: 2024-10-01 16:25 GMT

Photo : PTI

ಟೆಲ್‍ಅವೀವ್ : ದಕ್ಷಿಣ ಲೆಬನಾನ್‍ನಲ್ಲಿ ಹಿಜ್ಬುಲ್ಲಾ ಜತೆ ತೀವ್ರ ಹೋರಾಟ ನಡೆಯುತ್ತಿದೆ ಎಂದು ಇಸ್ರೇಲ್ ಮಿಲಿಟರಿ ಮಂಗಳವಾರ ಹೇಳಿದ್ದು ನೂರಾರು ಸೈನಿಕರು ಟ್ಯಾಂಕ್‍ಗಳ ಜತೆ ಗಡಿಭಾಗದ ಬಳಿಯ ಹಳ್ಳಿಗಳಿಗೆ ಪ್ರವೇಶಿಸಿದ್ದಾರೆ ಎಂದು ವರದಿಯಾಗಿದೆ.

ದಕ್ಷಿಣ ಲೆಬನಾನ್‍ನ ಹಳ್ಳಿಗಳಲ್ಲಿ ವೈಮಾನಿಕ ದಾಳಿ ಮತ್ತು ಫಿರಂಗಿಗಳ ಬೆಂಬಲದೊಂದಿಗೆ ಇಸ್ರೇಲ್ ಪಡೆಗಳು ಉದ್ದೇಶಿತ ಭೂ ಕಾರ್ಯಾಚರಣೆ ಆರಂಭಿಸಿವೆ. ಉತ್ತರದ ಪ್ರಾಂತಗಳಿಂದ ಲಿಟಾನಿ ನದಿಯ ದಕ್ಷಿಣ ಭಾಗಕ್ಕೆ ತಮ್ಮ ವಾಹನಗಳಲ್ಲಿ ಚಲಿಸದಂತೆ ನಾಗರಿಕರಿಗೆ ಇಸ್ರೇಲ್ ಮಿಲಿಟರಿ ಎಚ್ಚರಿಕೆ ನೀಡಿದೆ. ದಕ್ಷಿಣ ಲೆಬನಾನ್‍ನಲ್ಲಿ ಹಿಜ್ಬುಲ್ಲಾ ಗುರಿಗಳು ಮತ್ತು ಮೂಲ ಸೌಕರ್ಯಗಳ ವಿರುದ್ಧ ನಿಖರವಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಸೀಮಿತ, ಸ್ಥಳೀಯ ಮತ್ತು ಉದ್ದೇಶಿತ ದಾಳಿ ನಡೆಸಲಾಗುವುದು ಎಂದು ಇಸ್ರೇಲ್ ಹೇಳಿದೆ.

`ಗಡಿಭಾಗದ ಹಳ್ಳಿಗಳನ್ನು ಬಳಸಿಕೊಂಡು ಅಕ್ಟೋಬರ್ 7ರಂತೆ ಹಮಾಸ್ ಶೈಲಿಯ ದಾಳಿಗೆ ಹಿಜ್ಬುಲ್ಲಾ ಯೋಜನೆ ರೂಪಿಸಿತ್ತು. ಇಸ್ರೇಲ್ ಮೇಲೆ ಆಕ್ರಮಣ ನಡೆಸಲು, ಇಸ್ರೇಲ್ ಸಮುದಾಯದ ಮೇಲೆ ದಾಳಿ ಮಾಡಲು ಮತ್ತು ಅಮಾಯಕ ಪ್ರಜೆಗಳನ್ನು ಹತ್ಯೆ ಮಾಡಲು ಹಿಜ್ಬುಲ್ಲಾ ಯೋಜಿಸಿದೆ' ಎಂದು ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ವಕ್ತಾರ ಅಡ್ಮಿರಲ್ ಡೇನಿಯಲ್ ಹಗಾರಿ ಹೇಳಿದ್ದಾರೆ. ಸೇನಾ ಮುಖ್ಯಸ್ಥರು ಮತ್ತು ನಾರ್ದರ್ನ್ ಕಮಾಂಡ್ ರೂಪಿಸಿದ ಕ್ರಮಬದ್ಧ ಯೋಜನೆಯಂತೆ ಐಡಿಎಫ್ ದಾಳಿ ನಡೆಸಲಿದೆ. ಇದಕ್ಕಾಗಿ ಯೋಧರಿಗೆ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ದಿ ಜೆರುಸಲೇಂ ಪೋಸ್ಟ್' ವರದಿ ಮಾಡಿದೆ.

ಸಂಷರ್ಘ ಉಲ್ಬಣಗೊಳ್ಳುವುದಕ್ಕೆ ಆಸ್ಪದ ನೀಡದಂತೆ ಅಂತರಾಷ್ಟ್ರೀಯ ಆಗ್ರಹ ಹೆಚ್ಚುತ್ತಿರುವ ನಡುವೆಯೇ `ಯುದ್ಧ ಇನ್ನೂ ಮುಗಿದಿಲ್ಲ. ಹಿಜ್ಬುಲ್ಲಾ ವಿರುದ್ಧದ ಹೋರಾಟ ಮುಂದುವರಿಯಲಿದೆ' ಎಂದು ಇಸ್ರೇಲ್ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಹಿಜ್ಬುಲ್ಲಾ ಮುಖಂಡ ನಯಿಮ್ ಕಾಸೆಮ್ `ಇಸ್ರೇಲ್ ಪಡೆಗಳೊಂದಿಗೆ ನೇರ ಮುಖಾಮುಖಿಗೆ ಹಿಜ್ಬುಲ್ಲಾ ಸಿದ್ಧವಿದೆ' ಎಂದಿದ್ದಾರೆ.

►ಮಧ್ಯಪ್ರಾಚ್ಯಕ್ಕೆ ಹೆಚ್ಚುವರಿ ಪಡೆ ರವಾನಿಸಿದ ಅಮೆರಿಕ

ಭದ್ರತೆಯನ್ನು ಹೆಚ್ಚಿಸಲು ಮತ್ತು ಅಗತ್ಯಬಿದ್ದರೆ ಇಸ್ರೇಲ್ ಅನ್ನು ರಕ್ಷಿಸುವ ಕ್ರಮಕ್ಕೆ ಪೂರಕವಾಗಿ ಮಧ್ಯಪ್ರಾಚ್ಯಕ್ಕೆ ಹೆಚ್ಚುವರಿಯಾಗಿ ಕೆಲವು ಸಾವಿರ ಯೋಧರನ್ನು ರವಾನಿಸುವುದಾಗಿ ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ.

ಹೆಚ್ಚುವರಿ ಪಡೆಗಳು ಎಫ್-15ಇ ದಾಳಿ ಜೆಟ್‍ವಿಮಾನದ ಕಾರ್ಯಾಚರಣಾ ಘಟಕ, ಎಫ್-16, ಎ-10 ಮತ್ತು ಎಫ್-22 ಯುದ್ಧವಿಮಾನಗಳ ತುಕಡಿ ಮತ್ತು ಇವುಗಳ ನಿರ್ವಹಣೆಗೆ ಅಗತ್ಯವಿರುವ ಸಿಬ್ಬಂದಿಗಳನ್ನು ಒಳಗೊಂಡಿರುತ್ತವೆ. ಈಗ ಮಧ್ಯಪ್ರಾಚ್ಯದಲ್ಲಿರುವ ಯುದ್ಧವಿಮಾನಗಳೂ ಅಲ್ಲಿಯೇ ಮುಂದುವರಿಯಲಿದ್ದು ಇದರಿಂದ ಈ ಪ್ರದೇಶದಲ್ಲಿ ಇಸ್ರೇಲ್ ಭದ್ರತೆಗೆ ಪೂರಕವಾಗಿ ವಾಯುದಳದ ಬಲ ಹೆಚ್ಚಲಿದೆ ಎಂದು ಅಮೆರಿಕ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿಯ ವಕ್ತಾರೆ ಸಬ್ರೀನಾ ಸಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಮಧ್ಯಪ್ರಾಚ್ಯ ವಲಯದಲ್ಲಿ ನಿಯೋಜಿಸಲಾಗಿರುವ ಯುಎಸ್‍ಎಸ್ ಅಬ್ರಹಾಂ ಲಿಂಕನ್ ಸಮರ ನೌಕೆಯ ಉಪಸ್ಥಿತಿ ಇನ್ನೂ ಕೆಲ ಸಮಯ ಮುಂದುವರಿಯಲಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಘೋಷಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News