ವಿಶ್ವಸಂಸ್ಥೆ ನಿಷೇಧಕ್ಕೂ ಮುನ್ನ ಇಸ್ರೇಲ್ ಅಂತರಾಷ್ಟ್ರೀಯ ಕಾನೂನನ್ನು ಗೌರವಿಸಬೇಕು : ವಿಶ್ವಸಂಸ್ಥೆ

Update: 2024-10-30 15:40 GMT

PC : PTI

ವಿಶ್ವಸಂಸ್ಥೆ : ಗಾಝಾಕ್ಕೆ ಸಂಜೀವಿನಿಯಾಗಿರುವ ವಿಶ್ವಸಂಸ್ಥೆ ಏಜೆನ್ಸಿಯನ್ನು ನಿಷೇಧಿಸುವ ಹೊಸ ಕಾನೂನುಗಳನ್ನು ಇಸ್ರೇಲ್ ಜಾರಿಗೆ ತಂದರೆ, ಇಸ್ರೇಲ್ ಸರಕಾರವು ಅಂತರಾಷ್ಟ್ರೀಯ ಕಾನೂನಿನಡಿಯಲ್ಲಿ ಅವರ ಅಗತ್ಯಗಳನ್ನು ಪೂರೈಸಬೇಕಾಗುತ್ತದೆ ಎಂದು ವಿಶ್ವಸಂಸ್ಥೆ ಮಂಗಳವಾರ ಒತ್ತಿಹೇಳಿದೆ.

ಫೆಲೆಸ್ತೀನಿ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಏಜೆನ್ಸಿ(ಯು ಎನ್‍ ಆರ್‌ ಡಬ್ಲ್ಯೂಎ)ಗೆ ವಿಶ್ವಸಂಸ್ಥೆಯ ಬೇರೆ ಯಾವುದೇ ಪರ್ಯಾಯ ಏಜೆನ್ಸಿಗಳಿಲ್ಲ. ಗಾಝಾದಲ್ಲಿ ಇಸ್ರೇಲ್-ಹಮಾಸ್ ಯುದ್ಧದ ಸಂದರ್ಭ ಇದು ಸಂಜೀವಿನಿಯಾಗಿದೆ. ಇಸ್ರೇಲ್‍ ನ ಕಾನೂನು ಫೆಲೆಸ್ತೀನಿ ಪ್ರದೇಶಗಳಲ್ಲಿನ ಮಾನವೀಯ ಪರಿಸ್ಥಿತಿಯ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ' ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡ್ಯುಜರಿಕ್ ಕಳವಳ ವ್ಯಕ್ತಪಡಿಸಿದ್ದಾರೆ.

ಆಕ್ರಮಿತ ಶಕ್ತಿಯಾಗಿ, ಅಂತರಾಷ್ಟ್ರೀಯ ಮಾನವೀಯ ಕಾನೂನಿನಡಿಯಲ್ಲಿ ಆಹಾರ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಫೆಲೆಸ್ತೀನೀಯಾದ ಅಗತ್ಯಗಳನ್ನು ಪೂರೈಸುವುದನ್ನು ಇಸ್ರೇಲ್ ಖಚಿತ ಪಡಿಸಿಕೊಳ್ಳಬೇಕು. ಒಂದು ವೇಳೆ ಈ ಅಗತ್ಯಗಳನ್ನು ಈಡೇರಿಸುವ ಸ್ಥಿತಿಯಲ್ಲಿ ಇಸ್ರೇಲ್ ಇಲ್ಲದಿದ್ದರೆ, ವಿಶ್ವಸಂಸ್ಥೆ ಏಜೆನ್ಸಿಗಳು ಹಾಗೂ ಇತರ ಮಾನವೀಯ ಏಜೆನ್ಸಿಗಳ ಕಾರ್ಯಕ್ಕೆ ಅವಕಾಶ ಮತ್ತು ಅನುಕೂಲ ಮಾಡಿಕೊಡುವ ಬದ್ಧತೆಯನ್ನು ಅದು ಹೊಂದಿದೆ ಎಂದವರು ಹೇಳಿದ್ದಾರೆ.

ಯು ಎನ್‍ ಆರ್‌ ಡಬ್ಲ್ಯೂಎ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ(ನಮಗೆ ಅಲ್ಲಿ ಬೇರೆ ಪರ್ಯಾಯ ಏಜೆನ್ಸಿಯಿಲ್ಲ) ಆಗ ಇಸ್ರೇಲ್ ನಿರ್ವಾತವನ್ನು ತುಂಬಬೇಕಾಗುತ್ತದೆ. ಇಲ್ಲದಿದ್ದರೆ ಅದು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಲಿದೆ ಎಂದು ಡ್ಯುಜರಿಕ್ ಹೇಳಿದ್ದಾರೆ.

ಒಂದು ವರ್ಷಕ್ಕೂ ಅಧಿಕ ಸಮಯದಿಂದ ಮುಂದುವರಿದಿರುವ ಯುದ್ಧದ ಸಂದರ್ಭ ತುರ್ತು ಆಹಾರ ನೆರವನ್ನು ಅವಲಂನಿಸಿರುವ ಗಾಝಾದಲ್ಲಿ ವಿಶ್ವಸಂಸ್ಥೆಯ ಕಾರ್ಯಾಚರಣೆಗೆ ಯು ಎನ್‍ ಆರ್‌ ಡಬ್ಲ್ಯೂಎ ಬೆನ್ನೆಲುಬಾಗಿದೆ ಎಂದು `ಮಕ್ಕಳು, ಆರೋಗ್ಯ ಮತ್ತು ವಲಸೆಗಾಗಿ ವಿಶ್ವಸಂಸ್ಥೆಯ ಏಜೆನ್ಸಿ' ಹೇಳಿದೆ. ಯು ಎನ್‍ ಆರ್‌ ಡಬ್ಲ್ಯೂಎಗೆ ವಿಶ್ವದಾದ್ಯಂತ ಬೆಂಬಲ ವ್ಯಕ್ತವಾಗಿದೆ. ಸಾಮಾನ್ಯವಾಗಿ ತಮ್ಮೊಳಗೆ ಭಿನ್ನಾಭಿಪ್ರಾಯ ಹೊಂದಿರುವ ದೇಶಗಳೂ ಬೆಂಬಲ ನೀಡಿವೆ. ಈ ತಡೆಯನ್ನು ದಾಟಿ ಮುನ್ನಡೆಯಲು ಪ್ರಯತ್ನಿಸುವ ಯಾವುದೇ ಸದಸ್ಯ ದೇಶಗಳನ್ನು ನಾವು ಶ್ಲಾಘಿಸುತ್ತೇವೆ ಎಂದು ಡ್ಯುಜರಿಕ್ ಹೇಳಿದ್ದಾರೆ.

ಗಾಝಾದಲ್ಲಿರುವ ಯು ಎನ್‍ ಆರ್‌ ಡಬ್ಲ್ಯೂ ಎ ಏಜೆನ್ಸಿಯ ಸುಮಾರು 13,000 ಸಿಬ್ಬಂದಿ 2023ರಲ್ಲಿ ಹಮಾಸ್ ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ. ಯು ಎನ್‍ ಆರ್‌ ಡಬ್ಲ್ಯೂಎ ದ ನೂರಾರು ಸಿಬ್ಬಂದಿಗಳು ಹಮಾಸ್ ಜತೆ ಸಂಪರ್ಕದಲ್ಲಿದ್ದಾರೆ ಎಂದು ಇಸ್ರೇಲ್ ಆರೋಪಿಸಿದೆ. ಯು ಎನ್‍ ಆರ್‌ ಡಬ್ಲ್ಯೂಎ ತನ್ನ ಕೆಲಸ ಮುಂದುವರಿಸುವುದನ್ನು ತಡೆಯುವ ಎರಡು ಕಾನೂನುಗಳನ್ನು ಇಸ್ರೇಲ್ ಸೋಮವಾರ ಅಂಗೀಕರಿಸಿದೆ. ಇಸ್ರೇಲ್‍ ನ ನಿಕಟ ಮಿತ್ರ ಅಮೆರಿಕ ಸಹಿತ ಹಲವು ದೇಶಗಳು ಹಾಗೂ ಮಾನವೀಯ ನೆರವು ಒದಗಿಸುವ ಏಜೆನ್ಸಿಗಳು ಇಸ್ರೇಲ್‍ ನ ಕ್ರಮವನ್ನು ವಿರೋಧಿಸಿವೆ. ಇಸ್ರೇಲ್‍ ನ ಶಾಸನವು ಅಗತ್ಯ ಸೇವೆಗಳಿಗೆ ಯು ಎನ್‍ ಆರ್‌ ಡಬ್ಲ್ಯೂಎ ಯನ್ನು ಅವಲಂಬಿಸಿರುವ ಲಕ್ಷಾಂತರ ಫೆಲೆಸ್ತೀನೀಯರನ್ನು ಅಪಾಯಕ್ಕೆ ದೂಡಿದೆ' ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲರ್ ಪ್ರತಿಕ್ರಿಯಿಸಿದ್ದಾರೆ.

►1949ರಲ್ಲಿ ಸ್ಥಾಪನೆ

1948ರ ಅರಬ್-ಇಸ್ರೇಲಿ ಯುದ್ಧದ ಸಂದರ್ಭ ಹಾಗೂ ಬಳಿಕ ತಮ್ಮ ಮನೆಯಿಂದ ಸ್ಥಳಾಂತರಗೊಂಡಿರುವ ಫೆಲೆಸ್ತೀನೀಯರಿಗೆ ನೆರವಾಗಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ 1949ರಲ್ಲಿ ಯು ಎನ್‍ ಆರ್‌ ಡಬ್ಲ್ಯೂಎ ಏಜೆನ್ಸಿಯನ್ನು ಸ್ಥಾಪಿಸಿದೆ.

ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಎಲ್ಲಾ ಸಭೆಗಳಲ್ಲೂ ಸದಸ್ಯರು ಯು ಎನ್‍ ಆರ್‌ ಡಬ್ಲ್ಯೂ ಎ ಕಾರ್ಯವನ್ನು ಬೆಂಬಲಿಸಿದ್ದಾರೆ ಮತ್ತು ಗಾಝಾ ಹಾಗೂ ಲೆಬನಾನ್‍ ನಲ್ಲಿ ಇಸ್ರೇಲ್‍ ನ ಯುದ್ಧವನ್ನು ಖಂಡಿಸಿದ್ದು ಎರಡೂ ಕಡೆ ಶೀಘ್ರ ಕದನ ವಿರಾಮಕ್ಕೆ ಆಗ್ರಹಿಸಿದ್ದಾರೆ.

ಇಸ್ರೇಲ್ ಕ್ರಮಕ್ಕೆ ವಿಶ್ವಸಂಸ್ಥೆ ಮುಖ್ಯಸ್ಥರ ಖಂಡನೆ 

 ವಿಶ್ವಸಂಸ್ಥೆ ಏಜೆನ್ಸಿಯನ್ನು ನಿಷೇಧಿಸುವ ಇಸ್ರೇಲ್‍ ನ ಹೊಸ ಕಾನೂನು ಫೆಲೆಸ್ತೀನಿ ನಿರಾಶ್ರಿತರಿಗೆ ಸಹಾಯ ಮಾಡುವ ಜವಾಬ್ದಾರಿ ಹೊಂದಿರುವ ಯು ಎನ್‍ ಆರ್‌ ಡಬ್ಲ್ಯೂ ಎ ಯನ್ನು ಪರಿಣಾಮಕಾರಿಯಾಗಿ ದುರ್ಬಲಗೊಳಿಸಲಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಪತ್ರ ಬರೆದಿರುವ ಗುಟೆರಸ್ ` ಗಾಝಾ ಮತ್ತು ಪಶ್ಚಿಮ ದಂಡೆಯಲ್ಲಿರುವ ಫೆಲೆಸ್ತೀನೀಯರ ಮೇಲೆ ವಿನಾಶಕಾರಿ ಪರಿಣಾಮವನ್ನು ತಡೆಗಟ್ಟಲು ಮತ್ತು ಯು ಎನ್‍ ಆರ್‌ ಡಬ್ಲ್ಯೂ ಎ ಪೂರ್ವ ಜೆರುಸಲೇಂ ಸೇರಿದಂತೆ ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶಗಳಲ್ಲಿ ತನ್ನ ಕಾರ್ಯವನ್ನು ಮುಂದುವರಿಸಲು ಅನುಕೂಲ ಮಾಡಿಕೊಡಬೇಕು' ಎಂದು ಆಗ್ರಹಿಸಿದ್ದಾರೆ.

ವಿಶ್ವಸಂಸ್ಥೆ ಮುಖ್ಯಸ್ಥರ ಪತ್ರದ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಗೆ ಇಸ್ರೇಲ್ ರಾಯಭಾರಿ ಡ್ಯಾನಿ ಡ್ಯಾನನ್ ` ಯು ಎನ್‍ ಆರ್‌ ಡಬ್ಲ್ಯೂ ಎ ಕೃತ್ಯದ ಬಗ್ಗೆ ಕಣ್ಣು ಮುಚ್ಚಿ ಕುಳಿತಿರುವುದನ್ನು ಖಂಡಿಸುವ ಬದಲು ಗುಟೆರಸ್ ಇಸ್ರೇಲ್ ಅನ್ನು ಖಂಡಿಸುತ್ತಿದ್ದಾರೆ. ಗಾಝಾದಲ್ಲಿ ಮಾನವೀಯ ನೆರವು ಪೂರೈಸಲು ವಿಶ್ವಸಂಸ್ಥೆ ಏಜೆನ್ಸಿಗೆ ಆಸಕ್ತಿಯಿಲ್ಲ. ಅದು ವಿಶ್ವಸಂಸ್ಥೆಯ ಹೆಸರಿನಡಿ ಕಾರ್ಯನಿರ್ವಹಿಸುತ್ತಿರುವ ಹಮಾಸ್‍ ನ ಅಂಗಸಂಸ್ಥೆಯಾಗಿದೆ' ಎಂದು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News