ಪ್ರತೀಕಾರ ದಾಳಿಯ ನಿರೀಕ್ಷೆಯಲ್ಲೇ ಬಳಲಿದ ಇಸ್ರೇಲ್: ಇರಾನ್ ಲೇವಡಿ

Update: 2024-04-13 17:30 GMT

Photo : PTI

ಟೆಹ್ರಾನ್: ಇರಾನ್‍ನ ಪ್ರತೀಕಾರ ದಾಳಿಯನ್ನು ನಿರೀಕ್ಷಿಸಿಯೇ ಇಸ್ರೇಲ್ ಸಂಪೂರ್ಣ ಭಯಭೀತಗೊಂಡಿದೆ ಎಂದು ಇರಾನ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್‍ಜಿಸಿ) ಕಮಾಂಡರ್, ಇರಾನ್‍ನ ಪರಮೋಚ್ಛ ಮುಖಂಡ ಅಯತುಲ್ಲ ಆಲಿಖಾಮಿನೈ ಅವರ ಪ್ರಧಾನ ಮಿಲಿಟರಿ ಸಲಹೆಗಾರ ಜ| ಯಾಹ್ಯಾ ರಹೀಮ್ ಸಫಾವಿ ಹೇಳಿದ್ದಾರೆ.

ಇರಾನ್‍ನಿಂದ ದಾಳಿಯನ್ನು ನಿರೀಕ್ಷಿಸುತ್ತಿರುವುದರಿಂದ ಇಸ್ರೇಲ್ ಗಾಝಾದ ರಫಾ ಪ್ರದೇಶದ ಮೇಲೆ ದಾಳಿ ನಡೆಸುವುದನ್ನು ತಡೆಹಿಡಿದಿದೆ ಎಂದವರು ಹೇಳಿದ್ದಾರೆ.

ಇರಾನ್‍ನ ನಾಯಕತ್ವದಡಿ ಪ್ರತಿರೋಧ ಪಡೆ ಹಾಗೂ ಫೆಲೆಸ್ತೀನಿಯನ್ ರಾಷ್ಟ್ರದ ಗೆಲುವು ನಿಶ್ಚಿತವಾಗಿದೆ ಮತ್ತು ಅಮೆರಿಕ ಹಾಗೂ ಇಸ್ರೇಲ್‍ನ ಆಶಯಕ್ಕೆ ವಿರುದ್ಧವಾಗಿ ಇರಾನ್ ಹಾಗೂ ಪ್ರತಿರೋಧ ಪಡೆ ಕೇಂದ್ರಭಾಗದಲ್ಲಿರುವ ಹೊಸ ಮಧ್ಯಪ್ರಾಚ್ಯ ರೂಪುಗೊಳ್ಳಲಿದೆ ಎಂದವರು ಹೇಳಿದ್ದಾರೆ.

ಈ ಮಧ್ಯೆ, ಇಸ್ರೇಲ್ ಮೇಲೆ ದಾಳಿ ನಡೆಸದಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇರಾನ್‍ಗೆ ಎಚ್ಚರಿಸಿದ್ದು, ಇಸ್ರೇಲ್‍ನ ರಕ್ಷಣೆಗೆ ಅಮೆರಿಕ ಬದ್ಧ ಎಂದು ಪುನರುಚ್ಚರಿಸಿದ್ದಾರೆ. ಎಪ್ರಿಲ್ 1ರಂದು ಸಿರಿಯಾ ರಾಜಧಾನಿ ದಮಾಸ್ಕಸ್‍ನಲ್ಲಿ ಇರಾನ್ ದೂತಾವಾಸದ ಮೇಲೆ ನಡೆದ ದಾಳಿಯ ಹೊಣೆಯನ್ನು ಇಸ್ರೇಲ್ ವಹಿಸಿಕೊಂಡಿಲ್ಲ. ಆದರೆ ಇಸ್ರೇಲ್ ದಾಳಿ ನಡೆಸಿದ್ದು ಅದನ್ನು ಶಿಕ್ಷಿಸದೆ ಬಿಡುವುದಿಲ್ಲ ಎಂದು ಇರಾನ್ ಪ್ರತಿಜ್ಞೆ ಮಾಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಇಸ್ರೇಲ್ ರಕ್ಷಣಾ ಪಡೆಯ ಮುಖ್ಯಸ್ಥ ಹೆರ್ಝಿ ಹಲೆವಿ `ಇರಾನ್ ವಿರುದ್ಧ ಯಾವ ರೀತಿ ಆಕ್ರಮಣಕಾರಿಯಾಗಿ ವರ್ತಿಸಬೇಕೆಂಬುದು ನಮಗೆ ತಿಳಿದಿದೆ. ಅಮೆರಿಕ ಮತ್ತು ಈ ವಲಯದಲ್ಲಿ ನಮ್ಮ ಕಾರ್ಯತಂತ್ರದ ಪಾಲುದಾರರ ಸಹಕಾರದಲ್ಲಿ ಕಾರ್ಯನಿರ್ವಹಿಸುತ್ತೇವೆ' ಎಂದಿದ್ದಾರೆ. ಇಸ್ರೇಲ್ ಮೇಲೆ ಯಾವುದೇ ಕ್ಷಣದಲ್ಲಿ ಇರಾನ್ ದಾಳಿ ನಡೆಸಬಹುದು ಎಂದು ಅಮೆರಿಕದ ಅಧಿಕಾರಿಗಳು ಎಚ್ಚರಿಸಿದ್ದರೂ ಸದ್ಯಕ್ಕೆ ಇರಾನ್ ಮಾನಸಿಕ ಯುದ್ಧತಂತ್ರ ಅನುಸರಿಸುತ್ತಿರುವುದು ಸ್ಪಷ್ಟವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News