ಪಶ್ಚಿಮದಂಡೆಯಿಂದ ಸೇನೆ ಹಿಂಪಡೆದ ಇಸ್ರೇಲ್: ಅಗತ್ಯಬಿದ್ದರೆ ಮತ್ತೆ ದಾಳಿ; ನೆತನ್ಯಾಹು ಎಚ್ಚರಿಕೆ

Update: 2023-07-05 16:04 GMT

Netanyahu | Photo: PTI

ಜೆನಿನ್: ಆಕ್ರಮಿತ ಪಶ್ಚಿಮದಂಡೆಯಲ್ಲಿ ಫೆಲೆಸ್ತೀನಿಯನ್ ಸಶಸ್ತ್ರ ಹೋರಾಟಗಾರರ ಪ್ರಾಬಲ್ಯವಿರುವ ಪ್ರದೇಶದಲ್ಲಿ ತನ್ನ 2 ದಿನಗಳ ಕಾರ್ಯಾಚರಣೆ ಸದ್ಯಕ್ಕೆ ಅಂತ್ಯಗೊಂಡಿದೆ ಎಂದು ಹೇಳಿರುವ ಇಸ್ರೇಲ್ ಅಲ್ಲಿಂದ ತನ್ನ ಪಡೆಯನ್ನು ಹಿಂದಕ್ಕೆ ಕರೆಸಿಕೊಂಡಿದೆ.

ಸರಣಿ ವೈಮಾನಿಕ ದಾಳಿ ಮತ್ತು ನೂರಾರು ಯೋಧರ ಪಡೆಯ ಹೊಡೆತದಿಂದ ಜೆನಿನ್ ನಿರಾಶ್ರಿತರ ಶಿಬಿರದಲ್ಲಿರುವ ಸಶಸ್ತ್ರ ಹೋರಾಟಗಾರರ ಗುಂಪು `ಹಮಾಸ್' ತತ್ತರಿಸಿದ್ದು ಭಾರೀ ಹಾನಿ ಅನುಭವಿಸಿದೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ. 2 ದಿನಗಳ ಕಾರ್ಯಾಚರಣೆಯಲ್ಲಿ ಕನಿಷ್ಟ 13 ಫೆಲೆಸ್ತೀನೀಯರು ಹತರಾಗಿದ್ದರೆ ಸಾವಿರಾರು ಜನರು ಮನೆ ಬಿಟ್ಟು ಸುರಕ್ಷಿತ ಪ್ರದೇಶಕ್ಕೆ ಪರಾರಿಯಾಗಿದ್ದರು. ಘರ್ಷಣೆಯಲ್ಲಿ ಇಸ್ರೇಲ್ನ ಓರ್ವ ಯೋಧನೂ ಮೃತಪಟ್ಟಿದ್ದಾನೆ.

ಪಶ್ಚಿಮದಂಡೆಯ ಕಾರ್ಯಾಚರಣೆ ಅಂತ್ಯಗೊಂಡಿದ್ದು ಅಗತ್ಯಬಿದ್ದರೆ ಮತ್ತೆ ಮುಂದುವರಿಯಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ.

ʼಈ ಕ್ಷಣಗಳಲ್ಲಿ ನಾವು ಕಾರ್ಯಾಚರಣೆಯನ್ನು ಪೂರ್ಣಗೊಳಿಸಲಿದ್ದೇವೆ. ಆದರೆ ಜೆನಿನ್ನಲ್ಲಿ ನಮ್ಮ ವ್ಯಾಪಕ ಕಾರ್ಯಾಚರಣೆ ಇಲ್ಲಿಗೇ ಸ್ಥಗಿತವಾಗುತ್ತದೆ ಎಂದು ಇದರರ್ಥವಲ್ಲ. ಭಯೋತ್ಪಾದನೆಯ ಕಿಂಚಿತ್ ಸುಳಿವು ಸಿಕ್ಕರೂ ನಾವು ಮತ್ತೆ ಪ್ರಹಾರ ಮಾಡಿ ಅದನ್ನು ಮಟ್ಟಹಾಕಲಿದ್ದೇವೆ' ಎಂದು ಜೆನಿನ್ ಹೊರವಲಯದ ಸೇನಾನೆಲೆಗೆ ಭೇಟಿ ನೀಡಿದ ಬಳಿಕ ನೆತನ್ಯಾಹು ಘೋಷಿಸಿದರು.

ಜೆನಿನ್ ನಲ್ಲಿ ಇಸ್ರೇಲ್ ಕಾರ್ಯಾಚರಣೆಯು ಎರಡು ದಶಕಗಳ ಹಿಂದೆ ಇಸ್ರೇಲ್ ನ ಮುಕ್ತ ಆಕ್ರಮಣದ ವಿರುದ್ಧ ಫೆಲೆಸ್ತೀನಿಯರ ದಂಗೆ ಅಂತ್ಯಗೊಂಡ ಬಳಿಕದ ಅತ್ಯಂತ ತೀವ್ರವಾದ ಕಾರ್ಯಾಚರಣೆಯಲ್ಲಿ ಒಂದಾಗಿದೆ. ಜೆನಿನ್ ನಿರಾಶ್ರಿತರ ಶಿಬಿರದಲ್ಲಿ ಫೆಲೆಸ್ತೀನಿಯನ್ ಸಶಸ್ತ್ರ ಹೋರಾಟಗಾರರ ಗುಂಪು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿದ್ದು ಅದನ್ನು ನಾಶಮಾಡುವ ಉದ್ದೇಶದಿಂದ ಕಾರ್ಯಾಚರಣೆ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿದೆ.

ಸೇನೆಯ ಬುಲ್ಡೋಝರ್ಗಳು ಶಿಬಿರ ಪ್ರದೇಶದ ಇಕ್ಕಟ್ಟಾದ ರಸ್ತೆಗಳಲ್ಲಿ ಸಂಚರಿಸುವಾಗ ರಸ್ತೆಗಳು ಹಾಗೂ ಅಕ್ಕಪಕ್ಕದ ಹಲವು ಕಟ್ಟಡಗಳಿಗೆ ಹಾನಿಯಾಗಿದ್ದು ಶಿಬಿರದ ಸಾವಿರಾರು ನಿವಾಸಿಗಳು ಭಯದಿಂದ ಸುರಕ್ಷಿತ ಪ್ರದೇಶಕ್ಕೆ ಓಡಿಹೋಗಿದ್ದಾರೆ. ವಿದ್ಯುತ್ ಪೂರೈಕೆ ಮತ್ತು ನೀರು ಪೂರೈಕೆ ಕಡಿತಗೊಂಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ಈ ಪ್ರದೇಶದಲ್ಲಿ ಸ್ಫೋಟಕಗಳನ್ನು ಇರಿಸಿರುವ ಕಾರಣ ಬುಲ್ಡೋಝರ್ಗಳು ಅತ್ಯಗತ್ಯವಾಗಿದೆ .

ಕಾರ್ಯಾಚರಣೆಯ ಸಂದರ್ಭ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಬಾಂಬ್ ತಯಾರಿಸುವ ಕಚ್ಛಾವಸ್ತುಗಳು ಹಾಗೂ ಹಣವನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರದೇಶದಲ್ಲಿನ ಮಸೀದಿಯ ಆವರಣದಲ್ಲೂ ಉಗ್ರರು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿದ್ದರು ಎಂದು ಇಸ್ರೇಲ್ ಪ್ರತಿಪಾದಿಸಿದೆ.

ಈ ವರ್ಷ ವೆಸ್ಟ್ಬ್ಯಾಂಕ್ ನಲ್ಲಿ 140ಕ್ಕೂ ಅಧಿಕ ಫೆಲೆಸ್ತೀನೀಯರು ಇಸ್ರೇಲ್ ದಾಳಿಯಲ್ಲಿ ಹತರಾಗಿದ್ದರೆ, ಇಸ್ರೇಲ್ ಅನ್ನು ಗುರಿಯಾಗಿಸಿ ಫೆಲೆಸ್ತೀನೀಯರು ನಡೆಸಿದ ದಾಳಿಯಲ್ಲಿ ಕನಿಷ್ಟ 25 ಮಂದಿ ಮೃತಪಟ್ಟಿದ್ದಾರೆ. ಜೆನಿನ್ನ ಆಸ್ಪತ್ರೆಯ ಬಳಿ ಸೇನೆ ಅಶ್ರುವಾಯು ಸಿಡಿಸಿದಾಗ ತುರ್ತುಚಿಕಿತ್ಸಾ ಘಟಕದಲ್ಲಿ ಹೊಗೆತುಂಬಿಕೊಂಡಿದೆ. ಬಳಿಕ ತೀವ್ರನಿಗಾ ಘಟಕದಲ್ಲಿದ್ದ ರೋಗಿಗಳನ್ನು ಆಸ್ಪತ್ರೆಯ ಹಾಲ್ಗೆ ವರ್ಗಾಯಿಸಲಾಗಿದೆ ಎಂದು `ಡಾಕ್ಟರ್ಸ್ ವಿತೌಟ್ ಬಾರ್ಡರ್' ಎಂಬ ಎನ್ಜಿಒ ವರದಿ ಮಾಡಿದೆ.

ಕಾರ್ಯಾಚರಣೆಯ ಪ್ರಮಾಣವು `ಬದುಕುವ ಹಕ್ಕನ್ನು ಗೌರವಿಸುವುದು ಮತ್ತು ರಕ್ಷಿಸುವುದು ಸೇರಿದಂತೆ ಅಂತರಾಷ್ಟ್ರೀಯ ಮಾನವ ಹಕ್ಕುಗಳ ನಿಯಮ ಮತ್ತು ಮಾನದಂಡಗಳಿಗೆ ಸಂಬಂಧಿಸಿದಂತೆ ಗಂಭೀರ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥೆ ಹೇಳಿದ್ದಾರೆ.

ಹಮಾಸ್ ಪ್ರತಿದಾಳಿ

ಈ ಮಧ್ಯೆ, ಇಸ್ರೇಲ್ ರಾಜಧಾನಿ ಟೆಲ್ಅವೀವ್ನಲ್ಲಿ ಬುಧವಾರ ಹಮಾಸ್ ನ ಸದಸ್ಯನೊಬ್ಬ ಬಸ್ಸುನಿಲ್ದಾಣದಲ್ಲಿ ನಿಂತಿದ್ದವರ ಮೇಲೆ ತನ್ನ ಕಾರನ್ನು ನುಗ್ಗಿಸಿದ ಬಳಿಕ ಚೂರಿಯಿಂದ ದಾಳಿ ನಡೆಸಿದಾಗ ಗರ್ಭಿಣಿ ಮಹಿಳೆಯ ಸಹಿತ 8 ಮಂದಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ ಮಹಿಳೆಗೆ ಗರ್ಭಪಾತವಾಗಿದೆ. ಆಕ್ರಮಣ ನಡೆಸಿದ ದುಷ್ಕರ್ಮಿಯನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಇಸ್ರೇಲ್ ಸೇನೆ ವರದಿ ಮಾಡಿದೆ.

ಜೆನಿನ್ ನಲ್ಲಿ ಇಸ್ರೇಲ್ ನಡೆಸಿದ ದುಷ್ಕಂತ್ಯಕ್ಕೆ ಇದು ಪ್ರತೀಕಾರ ಕ್ರಮವಾಗಿದೆ ಎಂದು ಹಮಾಸ್ ಪ್ರತಿಕ್ರಿಯಿಸಿದೆ. ಸೇನೆ ಹಿಂಪಡೆಯುವ ಇಸ್ರೇಲ್ ಘೋಷಣೆಗೂ ಮುನ್ನ ಹಮಾಸ್ ಕಾರ್ಯಕರ್ತರು ಗಾಝಾದಿಂದ ಇಸ್ರೇಲ್ ಪ್ರದೇಶದೊಳಗೆ 5 ರಾಕೆಟ್ ಗಳನ್ನು ಪ್ರಯೋಗಿಸಿದ್ದರು. ಇವನ್ನು ತುಂಡರಿಸಲಾಗಿದೆ. ಬಳಿಕ ಗಾಝಾದ ಹಲವು ನಗರಗಳ ಮೇಲೆ ಇಸ್ರೇಲ್ ಯುದ್ಧವಿಮಾನ ದಾಳಿ ನಡೆಸಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News