ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹಮಾಸ್ ವಕ್ತಾರ ಸೇರಿ 7 ಮಂದಿ ಸಾವು

ಸಾಂದರ್ಭಿಕ ಚಿತ್ರ | Photo: NDTV
ಗಾಝಾ: ಉತ್ತರ ಗಾಝಾದಲ್ಲಿ ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಹಮಾಸ್ ವಕ್ತಾರ ಅಬ್ದೆಲ್ ಲತೀಫ್ ಅಲ್-ಖಾನ್ವ ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ಅಲ್-ಅಖ್ಸಾ ಟಿವಿ ವಾಹಿನಿ ಗುರುವಾರ ವರದಿ ಮಾಡಿದೆ.
ಉತ್ತರ ಗಾಝಾದ ಹೊರವಲಯದಲ್ಲಿರುವ ಜಬಾಲಿಯಾದಲ್ಲಿನ ಟೆಂಟ್ ನ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು ಅಲ್-ಖಾನ್ವ ಸಾವನ್ನಪ್ಪಿದ್ದಾರೆ ಹಾಗೂ ಇತರ ಹಲವರು ಗಾಯಗೊಂಡಿದ್ದಾರೆ. ಗಾಝಾ ನಗರ ಮತ್ತು ದಕ್ಷಿಣ ಗಾಝಾದ ಖಾನ್ ಯೂನಿಸ್ ನಗರದಲ್ಲಿ ನಡೆದ ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. ಈ ವಾರದ ಆರಂಭದಲ್ಲಿ ಇಸ್ರೇಲ್ ನ ದಾಳಿಯಲ್ಲಿ ಹಮಾಸ್ನ ಉನ್ನತ ನಾಯಕರಾದ ಇಸ್ಮಾಯಿಲ್ ಬರ್ಹೂಮ್ ಹಾಗೂ ಸಲಾಹ್ ಅಲ್-ಬರ್ದಾವೀಲ್ ಮೃತಪಟ್ಟಿದ್ದರು. ಇವರಿಬ್ಬರೂ ಹಮಾಸ್ನ 20 ಸದಸ್ಯರ ಉನ್ನತ ಮಟ್ಟದ ಸಮಿತಿಯ ಸದಸ್ಯರಾಗಿದ್ದರು. 2023ರಲ್ಲಿ ಗಾಝಾ ಯುದ್ಧ ಆರಂಭಗೊಂಡಂದಿನಿಂದ ಈ ಸಮಿತಿಯ 11 ಸದಸ್ಯರು ಇಸ್ರೇಲ್ ದಾಳಿಯಲ್ಲಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಮಾರ್ಚ್ 18ರಂದು ಕದನ ವಿರಾಮ ಒಪ್ಪಂದವನ್ನು ಮುರಿದು ಇಸ್ರೇಲ್ ಗಾಝಾದ ಮೇಲಿನ ವೈಮಾನಿಕ ದಾಳಿಯನ್ನು ಪುನರಾರಂಭಿಸಿದ ನಂತರ ಗಾಝಾದ್ಯಂತ ಇಸ್ರೇಲ್ ದಾಳಿಯಲ್ಲಿ ಕನಿಷ್ಠ 855 ಮಂದಿ ಸಾವನ್ನಪ್ಪಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಹೇಳಿದೆ.