ನೆದರ್ಲೆಂಡ್ಸ್ ನಲ್ಲಿ ಇಸ್ರೇಲ್ ಫುಟ್ ಬಾಲ್ ಅಭಿಮಾನಿಗಳ ಮೇಲೆ ದಾಳಿ; ಪ್ರಧಾನಿ ನೆತನ್ಯಾಹು ಪ್ರತಿಕ್ರಿಯಿಸಿದ್ದು ಹೀಗೆ..

Update: 2024-11-08 09:55 GMT

Screengrab:X/@yairlapid

ಆಮ್‌ಸ್ಟರ್‌ಡ್ಯಾಮ್‌: ಗುರುವಾರ ರಾತ್ರಿ ಇಲ್ಲಿ ನಡೆದ ಯುರೋಪ ಲೀಗ್ ನಲ್ಲಿ ಡಚ್ ಕ್ಲಬ್ ಎಎಫ್ಸಿ ಅಜಾಕ್ಸ್ ವಿರುದ್ಧದ ಇಸ್ರೇಲ್ ನ ಮೆಕಾಬಿ ಟೆಲ್ ಅವೀವ್ ಫುಟ್ ಬಾಲ್ ಕ್ಲಬ್ ನ ಪಂದ್ಯ ಮುಕ್ತಾಯಗೊಂಡ ನಂತರ, ನೂರಾರು ಮೆಕಾಬಿ ಟೆಲ್ ಅವೀವ್ ಫುಟ್ ಬಾಲ್ ಕ್ಲಬ್ ಅಭಿಮಾನಿಗಳ ಮೇಲೆ ಹಲ್ಲೆಕೋರರು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಹಲವಾರು ವಿಡಿಯೊಗಳಲ್ಲಿ ಹಲ್ಲೆಕೋರರು ಫೆಲೆಸ್ತೀನ್ ಧ್ವಜಗಳನ್ನು ಹಿಡಿದು, ‘ಫೆಲೆಸ್ತೀನ್ ಅನ್ನು ಸ್ವತಂತ್ರಗೊಳಿಸಿ’ ಎಂದು ಘೋಷಣೆ ಕೂಗುತ್ತಿರುವುದು ಸೆರೆಯಾಗಿದೆ. ಅಲ್ಲದೆ ಇಸ್ರೇಲ್ ಅಭಿಮಾನಿಗಳಿಗೂ ಅದೇ ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ. ಈ ವಿಡಿಯೊವನ್ನು ಅಮೆರಿಕದಲ್ಲಿ ಇಸ್ರೇಲ್ ರಾಯಭಾರ ಕಚೇರಿಯು ಬಿಡುಗಡೆ ಮಾಡಿದೆ.

ಈ ಘಟನೆಯ ನಂತರ, ನೆದರ್ಲೆಂಡ್ಸ್ ನಲ್ಲಿರುವ ಇಸ್ರೇಲ್ ಪ್ರಜೆಗಳು ಸುರಕ್ಷಿತವಾಗಿ ತವರಿಗೆ ಮರಳಲು ನೆರವು ನೀಡುವಂತೆ ನೆದರ್ಲೆಂಡ್ಸ್ ವಿದೇಶಾಂಗ ಸಚಿವರಿಗೆ ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಟ್ಝ್ ಮನವಿ ಮಾಡಿದ್ದಾರೆ.

ಈ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡಾ ಹೇಳಿಕೆ ಬಿಡುಗಡೆ ಮಾಡಿದ್ದು, ಆಮ್‌ಸ್ಟರ್‌ಡ್ಯಾಮ್‌ ನಲ್ಲಿ ಇಸ್ರೇಲ್ ಪ್ರಜೆಗಳ ಮೇಲೆ ಹಿಂಸಾತ್ಮಕ ಘಟನೆ ನಡೆದಿದೆ ಎಂಬ ವಿವರಗಳ ಮಾಹಿತಿಯನ್ನು ನಾವು ಸ್ವೀಕರಿಸಿದ್ದೇವೆ ಎಂದು ಹೇಳಿದ್ದಾರೆ. ಇದೇ ವೇಳೆ, ಇಸ್ರೇಲ್ ಪ್ರಜೆಗಳಿಗೆ ನೆರವು ಒದಗಿಸಲು ತಕ್ಷಣವೇ ಎರಡು ರಕ್ಷಣಾ ವಿಮಾನಗಳನ್ನು ನೆದರ್ಲೆಂಡ್ಸ್ ಗೆ ರವಾನಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಈ ನಡುವೆ, ಇಸ್ರೇಲ್ ನ ಮೆಕಾಬಿ ಟೆಲ್ ಅವೀವ್ ಫುಟ್ ಬಾಲ್ ಕ್ಲಬ್ ವಿರುದ್ಧ ನೆದರ್ಲೆಂಡ್ಸ್ ನ ಎಎಫ್ಎಕ್ಸ್ ಅಜಾಕ್ಸ್ ಫುಟ್ ಬಾಲ್ ಕ್ಲಬ್ 5-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News