ತಮ್ಮ ಯುದ್ಧ ಸಂಪುಟ ವಿಸರ್ಜಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
ಟೆಲ್ ಅವೀವ್: ಗಾಝಾದಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆ ಕುರಿತಂತೆ ನೋಡಿಕೊಳ್ಳಲು ತಾನು ರಚಿಸಿದ್ದ ಯುದ್ಧ ಸಂಪುಟ ಅನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವಿಸರ್ಜಿಸಿದ್ದಾರೆ.
ಇಸ್ರೇಲ್‌ನ ಆಡಳಿತ ಮೈತ್ರಿಕೂಟದಲ್ಲಿ ಯುದ್ಧದ ಆರಂಭಿಕ ದಿನಗಳಲ್ಲಿ ಸೇರಿಕೊಂಡಿದ್ದ ವಿಪಕ್ಷ ಸಂಸದ ಬೆನ್ನಿ ಗಾಂಟ್ಝ್ ಅವರು ಈ ಕ್ಯಾಬಿನೆಟ್‌ನಿಂದ ಹೊರಬಂದ ನಂತರ ನೆತನ್ಯಾಹು ಅದನ್ನು ವಿಸರ್ಜಿಸಿದ್ದಾರೆ.
ನೆತನ್ಯಾಹು ಸರ್ಕಾರದಲ್ಲಿರುವ ಬಲಪಂಥೀಯ ಸಂಸದರನ್ನು ಬದಿಗೆ ಸರಿಸುವ ವಿಧಾನವಾಗಿ ಸಣ್ಣ ಕ್ಯಾಬಿನೆಟ್ ರಚಿಸಲು ಬೆನ್ನಿ ಸಲಹೆ ನೀಡಿದ್ದರು.
ಯುದ್ಧ ಸಂಪುಟದಲ್ಲಿ ಬೆನ್ನಿ ಹೊರತಾಗಿ ನೆತನ್ಯಾಹು ಮತ್ತು ರಕ್ಷಣಾ ಸಚಿವ ಯೋವ್ ಗಾಲ್ಲಂಟ್ ಇದ್ದರು ಹಾಗೂ ಯುದ್ಧ ಸಂಬಂಧಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ಮುಂದೆ ನೆತನ್ಯಾಹು ಅವರು ಪ್ರಮುಖ ಹಾಗೂ ಸೂಕ್ಷ್ಮ ವಿಷಯಗಳಲ್ಲಿ ನಿರ್ಧಾರ ಕೈಗೊಳ್ಳಲು ತಮ್ಮ ಸರ್ಕಾರದ ಕೆಲವೊಂದು ಸದಸ್ಯರೊಂದಿಗೆ ಚರ್ಚಿಸುತ್ತಾರೆಂದು ಮೂಲಗಳು ತಿಳಿಸಿವೆ.
ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ದಾಳಿ ನಂತರ ಸರ್ಕಾರಕ್ಕೆ ಬೆಂಬಲ ಸೂಚಿಸಿ ನೆತನ್ಯಾಹು ಅವರ ದೀರ್ಘಕಾಲೀನ ರಾಜಕೀಯ ವೈರಿ ಬೆನ್ನಿ ಅವರು ಸರ್ಕಾರಕ್ಕೆ ಸೇರಿದ್ದರು. ಆದರೆ ನೆತನ್ಯಾಹು ಅವರು ಯುದ್ಧವನ್ನು ನಿಭಾಯಿಸಿದ ರೀತಿಯಿಂದ ಅಸಂತುಷ್ಟಗೊಂಡು ಈ ತಿಂಗಳು ಬೆನ್ನಿ ಸರ್ಕಾರದಿಂದ ಹೊರನಡೆದಿದ್ದರು.