ಗಾಝಾ ಒಪ್ಪಂದಕ್ಕೆ ಆಗ್ರಹಿಸಿ ಇಸ್ರೇಲ್‍ನಲ್ಲಿ ವ್ಯಾಪಕ ಪ್ರತಿಭಟನೆ

Update: 2024-07-07 14:21 GMT

 Photo Credit: AP

ಜೆರುಸಲೇಮ್: ಒತ್ತೆಯಾಳುಗಳ ಬಿಡುಗಡೆ ಒಪ್ಪಂದಕ್ಕೆ ಬರುವಂತೆ ಇಸ್ರೇಲ್ ಸರಕಾರವನ್ನು ಒತ್ತಾಯಿಸುವ ಉದ್ದೇಶದಿಂದ ರವಿವಾರ ಇಸ್ರೇಲ್‍ನಾದ್ಯಂತ ಪ್ರತಿಭಟನೆ ನಡೆದಿದ್ದು ಪ್ರತಿಭಟನಾಕಾರರು ರಸ್ತೆಗಳನ್ನು ತಡೆದು ಸಚಿವರ ಮನೆಯೆದುರು ಪಿಕೆಟಿಂಗ್ ನಡೆಸಿದರು ಎಂದು ವರದಿಯಾಗಿದೆ.

ಕಳೆದ ವರ್ಷದ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ಸಮಯವಾದ ಬೆಳಿಗ್ಗೆ 6:29 ಗಂಟೆಗೆ ಪ್ರತಿಭಟನೆ ಆರಂಭವಾಗಿದೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ. ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು. ಟೆಲ್‍ಅವೀವ್-ಜೆರುಸಲೇಮ್ ಹೆದ್ದಾರಿಯಲ್ಲಿ ಟಯರುಗಳನ್ನು ಸುಟ್ಟು ವಾಹನಗಳ ಸಂಚಾರಕ್ಕೆ ತಡೆಯೊಡ್ಡಲು ಪ್ರಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿದರು. ಹಲವು ಸಚಿವರು ಹಾಗೂ ಸಂಸದರ ಮನೆಯೆದುರೂ ಪ್ರತಿಭಟನೆ ನಡೆಸಿದ್ದು `ಸಂಪೂರ್ಣ ವಿಫಲ' ಎಂದು ಘೋಷಣೆ ಕೂಗಿದರು. ಪ್ರತಿಭಟನೆಗೂ ಮುನ್ನ ಪ್ರಧಾನಿ ನೆತನ್ಯಾಹು ಅವರ ಜೆರುಸಲೇಮ್ ನಿವಾಸದ ಸುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.

ಹೆದ್ದಾರಿಯಲ್ಲಿ ಸರಕಾರಿ ವಿರೋಧಿ ಘೋಷಣೆ ಕೂಗುತ್ತಾ ಪೊಲೀಸರೊಂದಿಗೆ ಘರ್ಷಣೆ ನಡೆಸಿದ ಪ್ರತಿಭಟನಾಕಾರರನ್ನು ಜಲಫಿರಂಗಿ ಬಳಸಿ ಚದುರಿಸಲಾಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News