ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ | 10 ಮಂದಿ ಮೃತ್ಯು, 5 ಮಂದಿಗೆ ಗಾಯ
ಬೈರೂತ್: ದಕ್ಷಿಣ ಲೆಬನಾನ್ ನ ನಬಾಟಿಯ ನಗರದಲ್ಲಿನ ವಸತಿ ಕಟ್ಟಡವೊಂದರ ಮೇಲೆ ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಸುಮಾರು ಹತ್ತು ಮಂದಿ ಮೃತಪಟ್ಟು, ಐದು ಮಂದಿ ಗಾಯಗೊಂಡಿದ್ದಾರೆ ಎಂದು ಶನಿವಾರ ಸರಕಾರಿ ಸುದ್ದಿ ಸಂಸ್ಥೆ NNA ವರದಿ ಮಾಡಿದೆ.
ಸಂತ್ರಸ್ತರೆಲ್ಲ ಸಿರಿಯಾ ನಾಗರಿಕರಾಗಿದ್ದು, ಸಂತ್ರಸ್ತರ ಗುರುತನ್ನು ಪತ್ತೆ ಹಚ್ಚಲು ಡಿಎನ್ಎ ಪರೀಕ್ಷೆಯನ್ನು ನಡೆಸಿದ ನಂತರ, ದಾಳಿಯಲ್ಲಿ ಮೃತಪಟ್ಟಿರುವವರ ಒಟ್ಟು ಸಂಖ್ಯೆಯನ್ನು ಪ್ರಕಟಿಸಲಾಗುವುದು ಎಂದು NNA ಸುದ್ದಿ ಸಂಸ್ಥೆ ಹೇಳಿದೆ.
ಹಿಝ್ಬುಲ್ಲಾ ಉಗ್ರರು ಬಳಸುತ್ತಿರುವ ಶಸ್ತ್ರಾಸ್ತ್ರ ಸಂಗ್ರಹಾಗಾರವನ್ನು ಗುರಿಯಾಗಿಸಿಕೊಂಡು ಈ ವೈಮಾನಿಕ ದಾಳಿಯನ್ನು ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಫೆಲೆಸ್ತೀನ್ ಇಸ್ಲಾಮಿಕ್ ಗುಂಪಾದ ಹಮಾಸ್ ಹಾಗೂ ಇಸ್ರೇಲ್ ನಡುವೆ ಮಧ್ಯಸ್ಥಿಕೆದಾರರು ನಡೆಸುತ್ತಿರುವ ಕದನ ವಿರಾಮ ಮಾತುಕತೆಯು ಶುಕ್ರವಾರ ಮಧ್ಯದಲ್ಲೇ ಸ್ಥಗಿತಗೊಂಡ ನಂತರ, ಈ ದಾಳಿ ನಡೆದಿದೆ. ಕದನ ವಿರಾಮ ಮಾತುಕತೆಯು ಮುಂದಿನ ವಾರ ಪುನಾರಂಭಗೊಳ್ಳಲಿದೆ ಎಂದು ಹೇಳಲಾಗಿದೆ.
ಹಿಝ್ಬುಲ್ಲಾ ಉಗ್ರರು ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್ ಮೇಲೆ ನಡೆಸಿದ್ದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಮಕ್ಕಳು ಹಾಗೂ ಅಪ್ರಾಪ್ತರು ಸೇರಿದಂತೆ ಒಟ್ಟು 12 ಮಂದಿ ಮೃತಪಟ್ಟ ನಂತರ, ಈ ಪ್ರಾಂತ್ಯದಲ್ಲಿನ ಉದ್ವಿಗ್ನತೆ ಮತ್ತಷ್ಟು ಬಿಗಡಾಯಿಸಿದೆ. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಸೇನೆಯು ಬೈರೂತ್ ಉಪಪಟ್ಟಣದಲ್ಲಿ ಉನ್ನತ ಹಿಝ್ಬುಲ್ಲಾ ಕಮಾಂಡರ್ ಒಬ್ಬರನ್ನು ಹತ್ಯೆಗೈದಿತ್ತು.
ಫೆಲೆಸ್ತೀನ್ ಗುಂಪಾದ ಹಮಾಸ್ ನ ರಾಜಕೀಯ ಮುಖ್ಯಸ್ಥರಾಗಿದ್ದ ಇಸ್ಮಾಯಿಲ್ ಹನಿಯೆಹ್ ಅವರನ್ನು ಟೆಹ್ರಾನ್ ನಲ್ಲಿ ಹತ್ಯೆಗೈದ ನಂತರ, ಹಿಝ್ಬುಲ್ಲಾ ಹಾಗೂ ಇರಾನ್ ದೇಶಗಳೆರಡೂ ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪಣ ತೊಟ್ಟಿವೆ.