ಇಸ್ರೇಲ್ ಸಂಪುಟದಲ್ಲಿ ಭುಗಿಲೆದ್ದ ಅಸಮಾಧಾನ

Update: 2024-05-19 16:00 GMT

ಬೆಂಜಮಿನ್ ನೆತನ್ಯಾಹು | Photo: NDTV

ಟೆಲ್‍ಅವೀವ್ : ಗಾಝಾ ಯುದ್ಧದ ಬಗ್ಗೆ ಜೂನ್ 8ರೊಳಗೆ ಹೊಸ ಯೋಜನೆಯನ್ನು ಅಳವಡಿಸಿಕೊಳ್ಳದಿದ್ದರೆ ಸರಕಾರಕ್ಕೆ ರಾಜೀನಾಮೆ ನೀಡುವುದಾಗಿ ಇಸ್ರೇಲ್‍ನ ಯುದ್ಧಕ್ಯಾಬಿನೆಟ್ ಸಚಿವ ಬೆನ್ನೀ ಗ್ರಾಂಟ್ಸ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಎಚ್ಚರಿಕೆ ನೀಡಿದ್ದಾರೆ.

ಹಮಾಸ್ ಎದುರಿಗಿನ ಯುದ್ಧದ ವಿಷಯದಲ್ಲಿ ಇಸ್ರೇಲ್ ನಾಯಕರೊಳಗಿನ ಭಿನ್ನಮತ, ಭಿನ್ನಾಭಿಪ್ರಾಯಗಳನ್ನು ಈ ಘೋಷಣೆ ಪ್ರತಿಬಿಂಬಿಸಿದೆ ಎಂದು ವಿಶ್ಲೇಷಿಸಲಾಗಿದೆ.

ಹಮಾಸ್ ಆರಂಭಿಸಿದ್ದ ಯುದ್ಧಕ್ಕೆ ಇಸ್ರೇಲ್‍ನ ಪ್ರತಿದಾಳಿ ಇತ್ತೀಚಿನ ದಿನಗಳಲ್ಲಿ ಹಾದಿ ತಪ್ಪುತ್ತಿರುವಂತೆ ಭಾಸವಾಗುತ್ತಿದೆ. ಮುಂಚೂಣಿ ಯುದ್ಧಕ್ಷೇತ್ರಗಳಲ್ಲಿ ಇಸ್ರೇಲ್ ಯೋಧರು ಅದ್ಭುತ ಶೌರ್ಯವನ್ನು ಪ್ರದರ್ಶಿಸುತ್ತಿದ್ದರೆ, ಅವರನ್ನು ಯುದ್ಧಕ್ಕೆ ಕಳುಹಿಸಿದ ಕೆಲವರು ಹೇಡಿತನ ಮತ್ತು ಜವಾಬ್ದಾರಿಯ ಕೊರತೆಯಿಂದ ವರ್ತಿಸುತ್ತಿದ್ದಾರೆ. ಗಾಝಾದ ಕಗ್ಗತ್ತಲ ಸುರಂಗದಲ್ಲಿ ಒತ್ತೆಯಾಳುಗಳು ನರಕಯಾತನೆ ಅನುಭವಿಸುತ್ತಿದ್ದರೆ ಕೆಲವರು ಅಸಂಬದ್ಧತೆಯಲ್ಲಿ ತೊಡಗಿದ್ದಾರೆ. ಕೆಲವು ರಾಜಕಾರಣಿಗಳಿಗೆ ಸ್ವಹಿತಾಸಕ್ತಿಯೇ ಮುಖ್ಯವಾಗಿದೆ' ಎಂದು ಗ್ರಾಂಟ್ಸ್ ಪರೋಕ್ಷವಾಗಿ ನೆತನ್ಯಾಹು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಸ್ಪಷ್ಟ ಮತ್ತು ವಾಸ್ತವಿಕ ಕಾರ್ಯಸೂಚಿಯಿದ್ದರೆ ಮಾತ್ರ ಯುದ್ಧವನ್ನು ಗೆಲ್ಲಬಹುದು ಎಂದಿದ್ದಾರೆ.

ನೆತನ್ಯಾಹು ಅವರ ಬದ್ಧ ರಾಜಕೀಯ ವಿರೋಧಿಯಾಗಿರುವ ಗ್ರಾಂಟ್ಸ್, ಅಕ್ಟೋಬರ್ 7ರ ಹಮಾಸ್ ದಾಳಿಯ ಬಳಿಕ ನೆತನ್ಯಾಹು ರಚಿಸಿದ್ದ ಯುದ್ಧ ಸಂಪುಟಕ್ಕೆ ರಾಷ್ಟ್ರೀಯ ಒಗ್ಗಟ್ಟಿನ ಸೂಚಕವಾಗಿ ಸೇರ್ಪಡೆಗೊಂಡಿದ್ದರು. ಗ್ರಾಂಟ್ಸ್ ಯುದ್ಧಸಂಪುಟ ತೊರೆದರೆ, ಇಸ್ರೇಲ್ ಗಾಝಾವನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದು ಆಗ್ರಹಿಸುವ ಕಟ್ಟಾ ಬಲಪಂಥೀಯ ಸಚಿವರ ಹಿಡಿತಕ್ಕೆ ನೆತನ್ಯಾಹು ಜಾರಲಿದ್ದಾರೆ.

ನೀವು ಮತಾಂಧರ ಮಾರ್ಗವನ್ನು ಆರಿಸಿದರೆ ಮತ್ತು ಇಡೀ ದೇಶವನ್ನು ಪಾತಾಳಕ್ಕೆ ಕೊಂಡೊಯ್ದರೆ ನಾವು ಸರಕಾರವನ್ನು ತೊರೆಯುವುದು ಅನಿವಾರ್ಯವಾಗುತ್ತದೆ ಎಂದು ಗ್ರಾಂಟ್ಸ್ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆತನ್ಯಾಹು ` ಸಚಿವ ಗ್ರಾಂಟ್ಸ್ ಹಮಾಸ್ ಬದಲು ಇಸ್ರೇಲ್ ಪ್ರಧಾನಿಗೆ ಗಡುವು ನೀಡಲು ನಿರ್ಧರಿಸಿದ್ದಾರೆ. ಅವರ ಷರತ್ತುಗಳು ಇಸ್ರೇಲ್‍ನ ಸೋಲಿಗೆ ಪರೋಕ್ಷವಾಗಿ ಕಾರಣವಾಗಲಿದೆ' ಎಂದಿದ್ದಾರೆ.

ನೆತನ್ಯಾಹು ಯುದ್ಧಸಂಪುಟ ರಚಿಸಿದಾಗ 6 ಅಂಶಗಳ ಯೋಜನೆಯನ್ನು ಅಂಗೀಕರಿಸಲಾಗಿತ್ತು. ಒತ್ತೆಯಾಳುಗಳ ವಾಪಸಾತಿ, ಗಾಝಾದಲ್ಲಿ ಹಮಾಸ್ ಆಳ್ವಿಕೆ ಅಂತ್ಯ, ಗಾಝಾ ಪಟ್ಟಿಯ ನಿಶಸ್ತ್ರೀಕರಣ, ಅಮೆರಿಕ, ಯುರೋಪ್, ಅರಬ್ ಮತ್ತು ಫೆಲಸ್ತೀನಿಯರ ಸಹಕಾರದಲ್ಲಿ ಗಾಝಾ ಪಟ್ಟಿಯಲ್ಲಿ ನಾಗರಿಕ ವ್ಯವಹಾರಗಳ ಅಂತರಾಷ್ಟ್ರೀಯ ಆಡಳಿತವನ್ನು ಸ್ಥಾಪಿಸುವುದು ಇದರಲ್ಲಿ ಸೇರಿದೆ.

 

ಹೊಸ ಚುನಾವಣೆ ತಪ್ಪಿಸಲು ಯುದ್ಧ ವಿಸ್ತರಿಸುವ ತಂತ್ರ

ಗಾಝಾ ಯುದ್ಧ ದೀರ್ಘಾವಧಿಗೆ ಮುಂದುವರಿಸುವ ಮೂಲಕ ದೇಶದಲ್ಲಿ ಹೊಸ ಚುನಾವಣೆಯನ್ನು ತಪ್ಪಿಸುವುದು ನೆತನ್ಯಾಹು ಯೋಜನೆಯಾಗಿದೆ ಎಂಬ ಆರೋಪವಿದೆ. ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ವಿಪಕ್ಷ ಮುಖಂಡ ಗ್ರಾಂಟ್ಸ್ ಹೆಸರು ಮುಂಚೂಣಿಯಲ್ಲಿದೆ. ಚುನಾವಣೆ ನಡೆದು ಅಧಿಕಾರ ಕಳೆದುಕೊಂಡರೆ, ತನ್ನ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆ ಆರಂಭವಾಗಬಹುದು ಎಂಬ ಆತಂಕ ನೆತನ್ಯಾಹು ಅವರಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News