ವೇದಿಕೆಯಲ್ಲಿ ಪ್ರಧಾನಿ ಮೋದಿಯನ್ನು ಪರಿಚಯಿಸಲು ಮರೆತು, ʼಮುಂದೆ ಯಾರು?ʼ ಎಂದು ಕೇಳಿದ ಬೈಡನ್

Update: 2024-09-22 09:37 GMT
Screengrab:X/@GuntherEagleman

ಅಮೆರಿಕ: ಕ್ವಾಡ್ ನಾಯಕರೊಂದಿಗಿನ ಸಭೆಯಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಪ್ರಧಾನಿ ನರೇಂದ್ರ ಮೋದಿಯನ್ನು ಪರಿಚಯಿಸಲು ಮರೆತು, 'ಮುಂದೆ ಯಾರು?' ಎಂದು ಪ್ರಶ್ನಿಸಿದ್ದು, ಮತ್ತೊಮ್ಮೆ ವೇದಿಕೆಯಲ್ಲಿ ಮರೆವು ಕಾಣಿಸಿಕೊಂಡು ಜೋ ಬೈಡನ್ ಸುದ್ದಿಯಾಗಿದ್ದಾರೆ.

ಡೆಲವೇರ್‌ನಲ್ಲಿ ನಡೆದ ಕ್ವಾಡ್ ನಾಯಕರೊಂದಿಗಿನ ಸಭೆಯಲ್ಲಿ ಈ ಘಟನೆ ನಡೆದಿದೆ. ಸಭೆಯಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಭಾರತದ ಪ್ರಧಾನಿ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಜಪಾನ್‌ನ ಫ್ಯೂಮಿಯೊ ಕಿಶಿಡಾ ಭಾಗವಹಿಸಿದ್ದರು. ಸಭೆಯಲ್ಲಿ ಇಂಡೋ-ಪೆಸಿಫಿಕ್‌ನಲ್ಲಿ ಕ್ಯಾನ್ಸರ್ ದರವನ್ನು ಇಳಿಸಲು ಕ್ಯಾನ್ಸರ್ ಮೂನ್‌ಶಾಟ್ ಉಪಕ್ರಮವನ್ನು ಪ್ರಾರಂಭಿಸಿದ್ದಾರೆ.

ಕ್ಯಾನ್ಸರ್ ಮೂನ್‌ಶಾಟ್ ಬಗ್ಗೆ ಮಾತನಾಡಿದ ನಂತರ, ಜೋ ಬೈಡನ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರಿಚಯಿಸಬೇಕಿತ್ತು. ಆದರೆ ಬೈಡನ್ ಹಠಾತ್ ಮರೆವಿಗೆ ಒಳಗಾಗಿದ್ದಾರೆ. ಮುಂದೇನು ಹೇಳಬೇಕೆಂದು ಗೊತ್ತಾಗದೆ ಗೊಂದಲಕ್ಕೀಡಾಗಿದ್ದಾರೆ. "ನಾನು ಮುಂದೆ ಯಾರನ್ನು ಪರಿಚಯಿಸುತ್ತಿದ್ದೇನೆ? ಮುಂದೆ ಯಾರು?ʼ ಎಂದು ಕೇಳಿದ್ದಾರೆ. ಈ ವೇಳೆ ನಿರೂಪಕರು ಮೋದಿಯ ಹೆಸರನ್ನು ಹೇಳಿದ್ದಾರೆ. ಆ ಬಳಿಕ ಅವರು ತಮ್ಮ ಭಾಷಣವನ್ನು ಮುಂದುವರಿಸಿದ್ದಾರೆ.

81ರ ಹರೆಯದ ಜೋ ಬೈಡನ್ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಈ ತರಹದ ಘಟನೆ ಅನುಭವಿಸಿದ್ದರು. ಜುಲೈನಲ್ಲಿ ವಾಷಿಂಗ್ಟನ್‌ನಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು ರಷ್ಯಾದ ಅಧ್ಯಕ್ಷರ ಹೆಸರಿನಲ್ಲಿ ಅಂದರೆ ವ್ಲಾಡಿಮಿರ್ ಪುಟಿನ್ ಎಂದು ಕರೆದಿದ್ದರು.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಸ್ಪರ್ಧಿಸುವ ಬಗ್ಗೆ ಈ ಮೊದಲು ಗಂಭೀರವಾದ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಅಂತಿಮವಾಗಿ ಅವರನ್ನು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News