ಗಾಝಾ ಆಸ್ಪತ್ರೆ ಮೇಲೆ ದಾಳಿ ಬಗ್ಗೆ ದತ್ತಾಂಶ ಆಧರಿಸಿ ಹೇಳಿಕೆ ನೀಡಿದ್ದೆ ಎಂದ ಜೋ ಬೈಡನ್
ಟೆಲ್ ಅವೀವ್: ಅಮೆರಿಕಾ ರಕ್ಷಣಾ ಇಲಾಖೆಯು ಒದಗಿಸಿದ ದತ್ತಾಂಶವನ್ನು ಆಧರಿಸಿ ಗಾಝಾ ಆಸ್ಪತ್ರೆಯ ಮೇಲೆ ನಡೆದ ದಾಳಿಯು ಬೇರೆ ಗುಂಪಿನಿಂದ ನಡೆದಿದೆಯೇ ಹೊರತು ಇಸ್ರೇಲ್ ನಿಂದಲ್ಲ, ಎಂದು ಹೇಳಿಕೆ ನೀಡಿದ್ದೆ ಎಂದು ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಸ್ಪಷ್ಟನೆ ನೀಡಿದ್ದಾರೆ ಎಂದು hindustantimes.com ವರದಿ ಮಾಡಿದೆ.
ಇದಕ್ಕೂ ಮುನ್ನ ಫೆಲೆಸ್ತೀನ್ ಉಲ್ಲೇಖಿಸಿ, ಗಾಝಾ ಆಸ್ಪತ್ರೆ ಮೇಲಿನ ದಾಳಿಯು ಬೇರೆ ಗುಂಪಿನಿಂದ ನಡೆದಿರುವಂತೆ ಕಾಣುತ್ತಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರಿಗೆ ಜೋ ಬೈಡನ್ ತಿಳಿಸಿದ್ದರು. ಹಮಾಸ್ ಪ್ರಕಾರ, ಸಾವಿರಾರು ಮಂದಿ ಹತ್ಯೆಗೀಡಾಗಿರುವ ಗಾಝಾ ಪಟ್ಟಿಯ ಮೇಲಿನ ಸ್ಫೋಟಗಳಿಂದ ತಾನು ದುಃಖಪೀಡಿತ ಮತ್ತು ಆಕ್ರೋಶಗೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ, “ನಾನು ಕಂಡಿರುವುದನ್ನು ಆಧರಿಸಿ ಹೇಳುವುದಾದರೆ, ಈ ಕೃತ್ಯವನ್ನು ಬೇರೆ ತಂಡ ಮಾಡಿದೆಯೇ ಹೊರತು ನೀವಲ್ಲ” ಎಂದು ಬೆಂಜಮಿನ್ ನೇತನ್ಯಾಹು ಅವರಿಗೆ ಜೋ ಬೈಡನ್ ಹೇಳಿದ್ದರು. ಆದರೆ, ಘಟನಾ ಸ್ಥಳದ ಹೊರಗೆ ಹಲವಾರು ಮಂದಿಯಿದ್ದರಾದರೂ, ಯಾವುದರಿಂದ ಸ್ಫೋಟ ಸಂಭವಿಸಿತು ಎಂಬುದರ ಬಗ್ಗೆ ಅವರಿಗೂ ಸ್ಪಷ್ಟತೆ ಇರಲಿಲ್ಲ ಎಂದೂ ಸಮಜಾಯಿಷಿ ನೀಡಿದ್ದರು.
ಹಮಾಸ್ ಅಕ್ಟೋಬರ್ 7ರಂದು ಅಚ್ಚರಿಯ ದಾಳಿಯಲ್ಲಿ ಇಸ್ರೇಲ್ ನಾಗರಿಕರನ್ನು ಹತ್ಯೆಗೈದಿದೆ ಎಂದು ಹೇಳಿದ ಅವರು, ಹಮಾಸ್ ದಾಳಿಯಲ್ಲಿ ಮೃತಪಟ್ಟ 1,300ಕ್ಕೂ ಹೆಚ್ಚು ಮಂದಿ ಇಸ್ರೇಲಿಗರೊಂದಿಗೆ 31 ಮಂದಿ ಅಮೆರಿಕನ್ನರೂ ಮೃತಪಟ್ಟ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ತನ್ನ ರಾಡಾರ್ ಹಾಗೂ ಸ್ವತಂತ್ರ ವಿಡಿಯೊವೊಂದರ ಪ್ರಕಾರ, ಫೆಲಿಸ್ತೀನ್ ಹಾರಿಸಿದ ಕ್ಷಿಪಣಿಯು ತಪ್ಪಾಗಿ ಹಾರಿಸಿದ್ದರಿಂದ ಈ ಭಾರಿ ಸ್ಫೋಟ ಸಂಭವಿಸಿದೆ ಎಂದು ಇಸ್ರೇಲ್ ಪ್ರತಿಪಾದಿಸಿದೆ. ಆದರೆ, ಇಸ್ರೇಲ್ ಪ್ರತಿಪಾದನೆಯನ್ನು ಹಮಾಸ್ ಅಲ್ಲಗಳೆದಿದ್ದು, ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಯನ್ನು ತೆರವು ಮಾಡಬೇಕು ಎಂದು ಇಸ್ರೇಲ್ ಆದೇಶಿಸಿದ್ದ ನಿದರ್ಶನವನ್ನು ನೀಡಿದೆ.