ಅಲಾಸ್ಕಾ ಬಳಿ ರಶ್ಯ, ಚೀನಾ ಬಾಂಬರ್ ವಿಮಾನಗಳ ಜಂಟಿ ಗಸ್ತು
ಮಾಸ್ಕೋ : ರಶ್ಯ ಮತ್ತು ಚೀನಾದ ಬಾಂಬರ್ ಜೆಟ್ಗಳು ಪೂರ್ವ ರಶ್ಯ ಮತ್ತು ಅಲಾಸ್ಕಾ ಬಳಿಯ ಬೇರಿಂಗ್ ಸಮುದ್ರದ ಮೇಲೆ ಜಂಟಿ ಗಸ್ತು ನಡೆಸಿವೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಗುರುವಾರ ಹೇಳಿದೆ.
ರಶ್ಯ ವಾಯುಪಡೆಯ ಟಿಯು-95ಎಂಎಸ್ ಕಾರ್ಯತಂತ್ರದ ಕ್ಷಿಪಣಿ ವಾಹಕಗಳು ಮತ್ತು ಚೀನಾ ವಾಯುಪಡೆಯ ಕ್ಸಿಯಾನ್ ಎಚ್-6 ಬಾಂಬರ್ ವಿಮಾನಗಳು ಚುಕ್ಚಿ ಮತ್ತು ಬೇರಿಂಗ್ ಸಮುದ್ರಗಳು ಹಾಗೂ ಉತ್ತರ ಪೆಸಿಫಿಕ್ ಮಹಾಸಾಗರದ ಮೇಲೆ ವೈಮಾನಿಕ ಗಸ್ತು ನಡೆಸಿವೆ ಎಂದು ಹೇಳಿಕೆ ತಿಳಿಸಿದೆ. ಗಸ್ತು ಅಂತಾರಾಷ್ಟ್ರೀಯ ಕಾನೂನನ್ನು ಪಾಲಿಸಿದೆ ಮತ್ತು ವಿದೇಶಿ ವಾಯುಪ್ರದೇಶವನ್ನು ಉಲ್ಲಂಘಿಸಿಲ್ಲ. ಮಾರ್ಗದ ಕೆಲವು ಹಂತಗಳಲ್ಲಿ ವಿದೇಶಗಳ ಯುದ್ಧವಿಮಾನ ಜತೆಗೂಡಿದೆ. ಗಸ್ತು 2024ರ ಮಿಲಿಟರಿ ಸಹಕಾರ ಯೋಜನೆಯ ಭಾಗವಾಗಿತ್ತು ಮತ್ತು ಮೂರನೇ ದೇಶಗಳ ವಿರುದ್ಧ ನಿರ್ದೇಶಿಸಲಾಗಿಲ್ಲ' ಎಂದು ರಶ್ಯಾ ಹೇಳಿದೆ.
ಅಲಾಸ್ಕಾ ಉತ್ತರ ಅಮೆರಿಕಾದ ವಾಯವ್ಯದಲ್ಲಿರುವ ಅಮೆರಿಕದ ರಾಜ್ಯವಾಗಿದೆ. ಈ ಮಧ್ಯೆ, ಅಲಾಸ್ಕಾ ಬಳಿಯ ಅಂತರಾಷ್ಟ್ರೀಯ ವಾಯುಪ್ರದೇಶದಲ್ಲಿ ಅಮೆರಿಕ ಮತ್ತು ಕೆನಡಾದ ಯುದ್ಧ ವಿಮಾನಗಳು ರಶ್ಯದ 2 ಮತ್ತು ಚೀನಾದ 2 ಬಾಂಬರ್ ವಿಮಾನಗಳನ್ನು ತಡೆದಿದ್ದವು ಎಂದು `ಅಮೆರಿಕ-ಕೆನಡಾ ಜಂಟಿ ಉತ್ತರ ಅಮೆರಿಕ ವಾಯುಕ್ಷೇತ್ರ ರಕ್ಷಣಾ ಕಮಾಂಡ್' ಬುಧವಾರ ಹೇಳಿಕೆ ನೀಡಿತ್ತು.