ಇಸ್ರೇಲ್ ವಿರುದ್ಧ ಹೋರಾಡಲು ಲೆಬನಾನ್, ಗಾಝಾದಲ್ಲಿ ಪಡೆಗಳನ್ನು ನಿಯೋಜಿಸುವುದಿಲ್ಲ : ಇರಾನ್
ಟೆಹ್ರಾನ್: ಇಸ್ರೇಲ್ ವಿರುದ್ಧ ಹೋರಾಡಲು ಗಾಝಾ ಅಥವಾ ಲೆಬನಾನ್‍ನಲ್ಲಿ ಇರಾನ್‍ನ ಪಡೆಗಳನ್ನು ನಿಯೋಜಿಸುವುದಿಲ್ಲ. ಯಾಕೆಂದರೆ ಅಲ್ಲಿರುವ ಹೋರಾಟಗಾರರು ತಮ್ಮನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಇರಾನ್‍ನ ವಿದೇಶಾಂಗ ಸಚಿವಾಲಯ ಸೋಮವಾರ ಹೇಳಿದೆ.
`ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‍ನ ಹೆಚ್ಚುವರಿ ಪಡೆಗಳನ್ನು ರವಾನಿಸುವ ಅಗತ್ಯವಿಲ್ಲ. ಲೆಬನಾನ್‍ನಲ್ಲಿ ಮತ್ತು ಫೆಲೆಸ್ತೀನ್‍ನಲ್ಲಿರುವ ಹೋರಾಟಗಾರರು ಇಸ್ರೇಲ್ ಆಕ್ರಮಣದ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಾಮರ್ಥ್ಯ ಮತ್ತು ಶಕ್ತಿಯನ್ನು ಹೊಂದಿದ್ದಾರೆ. ನಾವು ಯಾವುದೇ ಕಡೆಯಿಂದ ಈ ವಿಷಯದಲ್ಲಿ ಯಾವುದೇ ವಿನಂತಿಯನ್ನು ಸ್ವೀಕರಿಸಿಲ್ಲ. ಅವರಿಗೆ ನಮ್ಮ ಪಡೆಗಳ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಇರಾನ್ ವಿದೇಶಾಂಗ ಇಲಾಖೆಯ ವಕ್ತಾರ ನಾಸಿರ್ ಕನ್ನಾನಿ ಹೇಳಿದ್ದಾರೆ.
ಸೋಮವಾರ ಟೆಹ್ರಾನ್‍ನಲ್ಲಿರುವ ಹಿಜ್ಬುಲ್ಲಾ ಕಚೇರಿಗೆ ಭೇಟಿ ನೀಡಿ ಹಿಜ್ಬುಲ್ಲಾ ಮುಖಂಡ ಹಸನ್ ನಸ್ರುಲ್ಲಾಗೆ ಶ್ರದ್ಧಾಂಜಲಿ ಸಲ್ಲಿಸಿದ ಇರಾನ್‍ನ ಅಧ್ಯಕ್ಷ ಮಸೂದ್ ಪೆಝೆಷ್ಕಿಯಾನ್ ` ನಸ್ರುಲ್ಲಾ ಅವರ ಸಾವು ವ್ಯರ್ಥವಾಗುವುದಿಲ್ಲ. ಇದು ಇಸ್ರೇಲ್‍ನ ವಿನಾಶಕ್ಕೆ ಕಾರಣವಾಗಲಿದೆ' ಎಂದು ಪ್ರತಿಜ್ಞೆ ಮಾಡಿರುವುದಾಗಿ ವರದಿಯಾಗಿದೆ.