ಮನಿಲಾ | ತೈಲ ಸಾಗಿಸುತ್ತಿದ್ದ ಹಡಗು ಮುಳುಗಡೆ
ಮನಿಲಾ : 1.4 ದಶಲಕ್ಷ ಲೀಟರ್ ಕೈಗಾರಿಕಾ ಇಂಧನ ತೈಲವನ್ನು ಸಾಗಿಸುತ್ತಿದ್ದ ಫಿಲಿಪ್ಪೀನ್ಸ್ ಧ್ವಜ ಹೊಂದಿದ್ದ ಟ್ಯಾಂಕರ್ ಹಡಗು ಮನಿಲಾದ ಬಳಿ ಮುಳುಗಿದೆ. ಟ್ಯಾಂಕರ್ನಿಂದ ತೈಲ ಸೋರಿಕೆಯಾಗುವುದನ್ನು ನಿಯಂತ್ರಿಸುವ ಪ್ರಯತ್ನ ಮುಂದುವರಿದಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ಟ್ಯಾಂಕರ್ನಲ್ಲಿದ್ದ 17 ಸಿಬ್ಬಂದಿಗಳಲ್ಲಿ 16 ಮಂದಿಯನ್ನು ರಕ್ಷಿಸಲಾಗಿದ್ದು ನಾಪತ್ತೆಯಾಗಿರುವ ಸಿಬ್ಬಂದಿಯ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಸುಂಟರಗಾಳಿ ಮತ್ತು ಎತ್ತರದ ಅಲೆಗಳು ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿವೆ. ಕಡಲಿಗಿಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದ್ದು ಈಜುವುದನ್ನು ನಿಷೇಧಿಸಲಾಗಿದೆ ಎಂದು ಸಾರಿಗೆ ಕಾರ್ಯದರ್ಶಿ ಜೈಮ್ ಬಟಿಸ್ಟಾ ಹೇಳಿದ್ದಾರೆ.
ಗೇಮಿ ಚಂಡಮಾರುತ ಹಾಗೂ ಮುಂಗಾರು ಮಳೆಯ ಅಬ್ಬರದಿಂದ ಕಳೆದ ಕೆಲ ದಿನಗಳಿಂದ ಫಿಲಿಪ್ಪೀನ್ಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಫಿಲಿಪ್ಪೀನ್ಸ್ ನ ಇಲೊಯಿಲೊ ನಗರಕ್ಕೆ ಹೋಗುತ್ತಿದ್ದ ಎಂಟಿ ಟೆರಾನೋವಾ ಕಂಟೈನರ್ ಹಡಗು ಬಟಾನ್ ಪ್ರಾಂತದ ಬಳಿ ಮನಿಲಾ ಕೊಲ್ಲಿಯಲ್ಲಿ ಗುರುವಾರ ಬೆಳಿಗ್ಗೆ ಮುಳುಗಿದೆ. ಹಡಗಿನಿಂದ ಸೋರಿಕೆಯಾದ ತೈಲ ಪ್ರಮುಖ ಜಲಮಾರ್ಗವಾಗಿರುವ ಮನಿಲಾ ಕೊಲ್ಲಿಯಲ್ಲಿ ಹಲವು ಕಿ.ಮೀ.ವರೆಗೆ ಹರಡಿದೆ. `ಟ್ಯಾಂಕರ್ನಿಂದ ತೈಲ ಸೋರಿಕೆಯನ್ನು ನಿಯಂತ್ರಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ನಡೆಸಲಾಗುತ್ತಿದೆ. ಒಂದು ವೇಳೆ ಟ್ಯಾಂಕರ್ನಲ್ಲಿರುವ ಎಲ್ಲಾ ತೈಲಗಳೂ ಸೋರಿಕೆಯಾದರೆ ಅದು ಫಿಲಿಪ್ಪೀನ್ಸ್ ನ ಇತಿಹಾಸದಲ್ಲೇ ಅತೀ ದೊಡ್ಡ ಸೋರಿಕೆಯಾಗಲಿದೆ. ಟ್ಯಾಂಕರ್ ಮನಿಲಾ ಕೊಲ್ಲಿಯೊಳಗೆ ಇರುವುದರಿಂದ ಮನಿಲಾ ನಗರದ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು' ಎಂದು ಫಿಲಿಪ್ಪೀನ್ಸ್ ಕರಾವಳಿ ರಕ್ಷಣಾ ಪಡೆಯ ವಕ್ತಾರ ರಿಯರ್ ಅಡ್ಮಿರಲ್ ಅರ್ಮಾಂಡೊ ಬಲಿಲೊ ಎಚ್ಚರಿಕೆ ನೀಡಿದ್ದಾರೆ.
ಟ್ಯಾಂಕರ್ ನಿಂದ ಸೋರಿಕೆಯಾಗಿರುವ ತೈಲ ಸುಮಾರು 3.7 ಕಿ.ಮೀ. ದೂರದವರೆಗೆ ಹರಡಿದ್ದು ಬಲವಾದ ಅಲೆಗಳಿಂದಾಗಿ ಕ್ಷಿಪ್ರವಾಗಿ ಪೂರ್ವ ದಿಕ್ಕಿನತ್ತ ಸಾಗುತ್ತಿರುವ ಚಿತ್ರವನ್ನು ಕರಾವಳಿ ರಕ್ಷಣಾ ಪಡೆ ಬಿಡುಗಡೆಗೊಳಿಸಿದೆ. ಸೋರಿಕೆಯನ್ನು ನಿಯಂತ್ರಿಸಲು ಸಮುದ್ರ ಪರಿಸರ ರಕ್ಷಣಾ ಸಿಬ್ಬಂದಿಗಳ ನೆರವನ್ನು ಪಡೆಯಲಾಗಿದ್ದು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ಕರಾವಳಿ ರಕ್ಷಣಾ ಪಡೆ ಕಮಾಂಡೆಂಟ್ ಅಡ್ಮಿರಲ್ ರೋನಿ ಗ್ಯಾವನ್ ಹೇಳಿದ್ದಾರೆ.