ಮಣಿಪುರ ಹಿಂಸಾಚಾರ: ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ ಲೋಕಸಭೆ ಶುಕ್ರವಾರಕ್ಕೆ ಮುಂದೂಡಿಕೆ

Update: 2023-07-27 16:50 GMT

ಲೋಕಸಭಾ ಕಲಾಪ (Photo:PTI)

ಹೊಸದಿಲ್ಲಿ: ಮಣಿಪುರ ಹಿಂಸಾಚಾರ ಕುರಿತು ಪ್ರತಿಪಕ್ಷ ಸದಸ್ಯರ ನಿರಂತರ ಪ್ರತಿಭಟನೆಗಳ ನಡುವೆಯೇ ಗುರುವಾರ ಲೋಕಸಭಾ ಕಲಾಪಗಳನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಲೋಕಸಭೆಯಲ್ಲಿ ಪ್ರಧಾನಿಯವರ ಉಪಸ್ಥಿತಿಗೆ ಆಗ್ರಹಿಸಿ ಪ್ರತಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗುತ್ತ ಫಲಕಗಳನ್ನು ಪ್ರದರ್ಶಿಸುತ್ತಿರುವಂತೆಯೇ ಸದನವು ಎರಡು ಮಸೂದೆಗಳನ್ನು ಕೈಗೆತ್ತಿಕೊಂಡು ಸಂಕ್ಷಿಪ್ತ ಚರ್ಚೆಯ ಬಳಿಕ ಅಂಗೀಕರಿಸಿತು.

ಲೋಕಸಭೆಯು ದಿನದ ಮಟ್ಟಿಗೆ ಮುಂದೂಡಲ್ಪಡುವ ಮುನ್ನ ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆ ಮತ್ತು ಬಳಕೆಯಲ್ಲಿಲ್ಲದ ಕಾನೂನುಗಳನ್ನು ರದ್ದುಗೊಳಿಸಲು ಮಸೂದೆ ಅಂಗೀಕಾರಗೊಂಡವು.

ಗುರುವಾರ ಸದನವು ಮಣಿಪುರ ವಿಷಯ ಕುರಿತು ಒಟ್ಟು ಮೂರು ಮುಂದೂಡಿಕೆಗಳಿಗೆ ಸಾಕ್ಷಿಯಾಗಿತ್ತು.

ಮುಂಚಿನ ಮುಂದೂಡಿಕೆಯ ಬಳಿಕ ಅಪರಾಹ್ನ ಎರಡು ಗಂಟೆಗೆ ಸದನವು ಸಮಾವೇಶಗೊಂಡಾಗ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ವ್ಯತ್ಯಯಗಳ ನಡುವೆಯೇ ಸರಕಾರದ ವಿದೇಶ ವ್ಯಹಾರಗಳ ಕುರಿತು ಹೇಳಿಕೆಯನ್ನು ನೀಡಿದರು. ಪ್ರತಿಪಕ್ಷಗಳಿಂದ ಅಬ್ಬರದ ಘೋಷಣೆಗಳ ನಡುವೆಯೇ ಅವರು ಕಳೆದ ನಾಲ್ಕು ತಿಂಗಳುಗಳಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿಯವರ ವಿದೇಶ ಪ್ರವಾಸಗಳ ವಿವರವಾದ ಸಾರಾಂಶವನ್ನು ನೀಡಿದರು. ಒಂದು ಹಂತದಲ್ಲಿ ಪ್ರತಿಪಕ್ಷಗಳ ಸದಸ್ಯರಿಂದ ‘ಇಂಡಿಯಾ,ಇಂಡಿಯಾ’ ಘೋಷಣೆಗಳ ನಡುವೆ ಜೈಶಂಕರ್ ಏನು ಹೇಳುತ್ತಿದ್ದಾರೆ ಎನ್ನುವುದೇ ಕೇಳಿಸುತ್ತಿರಲಿಲ್ಲ.

ಜೈಶಂಕರ್ ಹೇಳಿಕೆಗೆ ಪ್ರತಿಪಕ್ಷಗಳಿಂದ ಅಡ್ಡಿ ಕುರಿತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಅವರ ನಡುವೆ ವಾಗ್ಯುದ್ಧಕ್ಕೂ ಸದನವು ಸಾಕ್ಷಿಯಾಯಿತು.

ಜೈಶಂಕರ್ ಹೇಳಿಕೆಯ ಬಳಿಕ ಚೌಧುರಿ ಕ್ರಿಯಾಲೋಪವನ್ನೆತ್ತಲು ಪ್ರಯತ್ನಿಸಿದರು. ಈ ವೇಳೆ ಎದ್ದು ನಿಂತ ಗೋಯಲ್,ವಿದೇಶಾಂಗ ಸಚಿವರ ಹೇಳಿಕೆಗೆ ವ್ಯತ್ಯಯವನ್ನು ವಿರೋಧಿಸಿ ತಾನು ಚೌಧುರಿಯವರಿಗೆ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಸರಕಾರ ಮತ್ತು ಪ್ರತಿಪಕ್ಷ ನಡುವೆ ವಾಕ್ಸಮರ ಮುಂದುವರಿದಿರುವಂತೆ ಹಲವಾರು ಪ್ರತಿಪಕ್ಷ ಸದಸ್ಯರು ಮಣಿಪುರ ಹಿಂಸಾಚಾರ ಕುರಿತು ನಿರಂತರವಾಗಿ ಘೋಷಣೆಗಳನ್ನು ಕೂಗುತ್ತಿದ್ದರಿಂದ ಸದನವನ್ನು 20 ನಿಮಿಷಗಳ ಕಾಲ ಮುಂದೂಡಲಾಯಿತು. ಸದನವು ಮುಂದೂಡಲ್ಪಡುವ ಕ್ಷಣಗಳ ಮುನ್ನ ಕಾಂಗ್ರೆಸ್ ಸದಸ್ಯರೋರ್ವರು ಹರಿದ ಕಾಗದಗಳನ್ನು ಸ್ಪೀಕರ್ ಪೀಠದತ್ತ ಎಸೆದರು.

ಅಪರಾಹ್ನ ಮೂರು ಗಂಟೆಗೆ ಸದನವು ಮರುಸಮಾವೇಶಗೊಂಡಾಗ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿಯವರು ಘಟನೆಯನ್ನು ಪ್ರಸ್ತಾಪಿಸಿ,ಸದಸ್ಯರನ್ನು ಹೆಸರಿಸುವಂತೆ ಸಭಾಧ್ಯಕ್ಷರನ್ನು ಆಗ್ರಹಿಸಿದರು.

ನಂತರ ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆಯನ್ನು ಪರಿಗಣನೆಗಾಗಿ ಕೈಗೆತ್ತಿಕೊಳ್ಳಲಾಯಿತು.

ಮಸೂದೆಯ ಕುರಿತು ತನ್ನ ಆರಂಭಿಕ ಹೇಳಿಕೆಯಲ್ಲಿ ಗೋಯಲ್ ಅವರು ಪ್ರತಿಭಟನೆಯ ಸಂಕೇತವಾಗಿ ಕಪ್ಪು ಉಡುಪು ಧರಿಸಿದ್ದ ಪ್ರತಿಪಕ್ಷ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ತಮ್ಮ ಕರಾಳ ಕೃತ್ಯಗಳನ್ನು ತಮ್ಮ ಉಡುಪಿನ ಹಿಂದೆ ಮರೆ ಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದು ಗೋಯಲ್ ಆರೋಪಿಸಿದರು.

ಆಪ್ ರಾಜ್ಯಸಭಾ ಸದಸ್ಯ ರಾಘವ ಛಡ್ಡಾ ಅವರನ್ನು ಹೆಸರಿಸದೆ ಗೋಯಲ್,ಕಪ್ಪು ಉಡುಪುಗಳಲ್ಲಿ ಅವರು ಕಾಗೆಯನ್ನೂ ಆಕರ್ಷಿಸಿದ್ದಾರೆ ಎಂದರು. ಬುಧವಾರ ಸಂಸತ್ ಸಂಕೀರ್ಣದಲ್ಲಿ ಛಡ್ಡಾ ನಡೆದುಕೊಂಡು ಹೋಗುತ್ತಿದ್ದಾಗ ಕಾಗೆಯೊಂದು ಅವರ ತಲೆಯ ಮೇಲೆ ಹಾರಾಡುತ್ತಿದ್ದ ದೃಶ್ಯ ಛಾಯಾಚಿತ್ರದಲ್ಲಿ ಸೆರೆಯಾಗಿತ್ತು.

ಬೆಳಿಗ್ಗೆ ಕಪ್ಪು ಬಟ್ಟೆಗಳನ್ನು ಧರಿಸಿದ್ದ ಪ್ರತಿಪಕ್ಷ ಸದಸ್ಯರು ಜನಾಂಗೀಯ ಕಲಹದಿಂದ ತತ್ತರಿಸಿರುವ ಮಣಿಪುರದಲ್ಲಿಯ ಸ್ಥಿತಿಯ ಬಗ್ಗೆ ಪ್ರಧಾನಿಯಿಂದ ಹೇಳಿಕೆ ಮತ್ತು ನಂತರ ಆ ಕುರಿತು ಪೂರ್ಣ ಪ್ರಮಾಣದ ಚರ್ಚೆಗೆ ಆಗ್ರಹಿಸಿ ತಮ್ಮ ಪ್ರತಿಭಟನೆಗಳನ್ನು ಮುಂದುವರಿಸಿದ್ದರಿಂದ ಲೋಕಸಭೆಯನ್ನು ಅಪರಾಹ್ನ ಎರಡು ಗಂಟೆಯವರೆಗೆ ಮುಂದೂಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News