ಮೊರಾಕ್ಕೋ ಭೂಕಂಪ: 2,100 ದಾಟಿದ ಮೃತರ ಸಂಖ್ಯೆ

Update: 2023-09-11 17:31 GMT

Photo: twitter \ @BongoIdeas

ರಬಾತ್: ಶುಕ್ರವಾರ ರಾತ್ರಿ ಮೊರಾಕ್ಕೋದಲ್ಲಿ ಅಪರೂಪದ, ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 820 ಜನರು ಮೃತಪಟ್ಟಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ಅಟ್ಲಾಸ್ ಪರ್ವತ ಪ್ರದೇಶದಲ್ಲಿಯ ಗ್ರಾಮಗಳು ಮತ್ತು ಐತಿಹಾಸಿಕ ನಗರ ಮರಕೇಶ್ ನಲ್ಲಿ ಹಲವಾರು ಕಟ್ಟಡಗಳು ಹಾನಿಗೀಡಾಗಿವೆ.

ಭೂಕಂಪದಿಂದ ತೀವ್ರ ಹಾನಿಗೀಡಾಗಿರುವ ದುರ್ಗಮ ಪ್ರದೇಶಗಳನ್ನು ತಲುಪಲು ರಕ್ಷಣಾ ತಂಡಗಳು ಹೆಣಗಾಡುತ್ತಿದ್ದು, ಸಾವುನೋವುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ವ್ಯಕ್ತವಾಗಿದೆ.

ಭೂಕಂಪದಿಂದಾಗಿ ನಿದ್ರೆಯಲ್ಲಿದ್ದ ಜನರು ಭಯದಿಂದ ಜೀವವುಳಿಸಿಕೊಳ್ಳಲು ಹೊರಗೋಡಿ ರಾತ್ರಿಯಿಡೀ ಬೀದಿಗಳಲ್ಲಿ ಆಶ್ರಯ ಪಡೆದಿದ್ದರು.

ತುರ್ತು ಕಾರ್ಯಾಚರಣೆ ಸಿಬ್ಬಂದಿಗಳು ಅವಶೇಷಗಳಡಿ ಬದುಕಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕನಿಷ್ಠ 820 ಜನರು ಮೃತಪಟ್ಟಿದ್ದಾರೆ. ಹೆಚ್ಚಿನ ಸಾವುಗಳು ಭೂಕಂಪದ ಕೇಂದ್ರಬಿಂದುವಿಗೆ ಸಮೀಪದ ಮರಕೇಶ್ ಮತ್ತು ಐದು ಪ್ರಾಂತ್ಯಗಳಲ್ಲಿ ಸಂಭವಿಸಿವೆ. 672 ಜನರು ಗಾಯಗೊಂಡಿದ್ದಾರೆ ಎಂದು ಮೊರಾಕ್ಕೋದ ಆಂತರಿಕ ಸಚಿವಾಲಯವು ಶನಿವಾರ ಬೆಳಿಗ್ಗೆ ವರದಿ ಮಾಡಿದೆ. ಗಾಯಾಳುಗಳ ಪೈಕಿ 205 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅದು ತಿಳಿಸಿದೆ.

ಸಮೀಪದ ಪಟ್ಟಣಗಳಲ್ಲಿಯ ಹಲವಾರು ಮನೆಗಳು ಭಾಗಶಃ ಅಥವಾ ಸಂಪೂರ್ಣವಾಗಿ ಕುಸಿದುಬಿದ್ದಿವೆ, ಕೆಲವು ಕಡೆಗಳಲ್ಲಿ ವಿದ್ಯುತ್ ಮತ್ತು ರಸ್ತೆ ಸಂಪರ್ಕಗಳು ಕಡಿತಗೊಂಡಿವೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಭೂಕಂಪದ ಕೇಂದ್ರಬಿಂದುವಿಗೆ ಸಮೀಪದ ತಲತ್ ನಾಯಾಕಿಬ್ ಪಟ್ಟಣದ ಮುಖ್ಯಸ್ಥ ಅಬ್ದುರ್ರಹೀಂ ದಾವೂದ್, ಅಲ್ ಹೌಝ್ ಪ್ರಾಂತ್ಯದಲ್ಲಿ ಅಧಿಕಾರಿಗಳು ಆಂಬ್ಯುಲೆನ್ಸ್ ಗಳ ಸಂಚಾರಕ್ಕಾಗಿ ಮತ್ತು ಪೀಡಿತ ಜನರ ನೆರವಿಗಾಗಿ ರಸ್ತೆಗಳನ್ನು ತೆರವುಗೊಳಿಸಲು ಶ್ರಮಿಸುತ್ತಿದ್ದಾರೆ. ಆದರೆ ಪರ್ವತ ಪ್ರದೇಶದ ಗ್ರಾಮಗಳ ನಡುವಿನ ಅಂತರ ಹೆಚ್ಚಿರುವುದರಿಂದ ಹಾನಿಯ ವ್ಯಾಪ್ತಿಯನ್ನು ತಿಳಿಯಲು ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ಅಲ್ ಹೌಝ್ ಅಟ್ಲಾಸ್ ಪರ್ವತದ ಎತ್ತರದ ಪ್ರದೇಶಗಳಲ್ಲಿರುವ ರಮಣೀಯ ಗ್ರಾಮಗಳು ಮತ್ತು ಕಣಿವೆಗಳು ಹಾಗೂ ಪರ್ವತದ ಪಾರ್ಶ್ವಗಳಲ್ಲಿ ನಿರ್ಮಿಸಲಾಗಿರುವ ಅಮೇಝಿಗ್ ಗ್ರಾಮಗಳಿಗಾಗಿ ಪ್ರಸಿದ್ಧವಾಗಿದೆ.

ಮೊರಾಕ್ಕೋದ ಮಿಲಿಟರಿ ಮತ್ತು ತುರ್ತು ಸೇವೆಗಳ ಸಿಬ್ಬಂದಿಗಳು ಹಾನಿಗೀಡಾಗಿರುವ ಪ್ರದೇಶಗಳಿಗೆ ನೆರವು ತಲುಪಿಸಲು ಶ್ರಮಿಸುತ್ತಿದ್ದಾರೆ. ಆದರೆ ಭೂಕಂಪನದ ಕೇಂದ್ರಬಿಂದುವಿನ ಸುತ್ತಲಿನ ಪರ್ವತ ಪ್ರದೇಶಕ್ಕೆ ಸಾಗುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಮತ್ತು ಉರುಳಿ ಬಿದ್ದಿರುವ ಬಂಡೆಗಳಿಂದಾಗಿ ಅಡೆತಡೆಯುಂಟಾಗಿದ್ದು, ಇದು ರಕ್ಷಣಾ ಪ್ರಯತ್ನಗಳನ್ನು ನಿಧಾನಗೊಳಿಸಿದೆ. ಬ್ಲಾಂಕೆಟ್ಗಳು,ಶಿಬಿರ ಮಂಚಗಳು ಇತ್ಯಾದಿಗಳನ್ನು ಹೊತ್ತಿರುವ ಟ್ರಕ್ ಗಳು ಭೂಕಂಪನ ಪೀಡಿತ ಪ್ರದೇಶಗಳನ್ನು ತಲುಪಲು ಯತ್ನಿಸುತ್ತಿವೆ ಎಂದು ಅಧಿಕಾರಿಯೋರ್ವರು ತಿಳಿಸಿದರು.

ಆ್ಯಂಬುಲೆನ್ಸ್ ಗಳು ಮತ್ತು ಬೈಕ್ಗಳು ಹಳೆಯ ಮರಕೇಶ್ ನಗರದ ಹೊರವಲಯವನ್ನು ತಲುಪಿದ್ದು,ಆ ಪ್ರದೇಶದಲ್ಲಿ ವ್ಯಾಪಾರ-ವ್ಯವಹಾರಗಳು ಎಂದಿನಂತೆ ನಡೆಯುತ್ತಿವೆ.

ವಿಶ್ವಾದ್ಯಂತದಿಂದ ಸಂತಾಪ ಸಂದೇಶಗಳು ಮೊರಾಕ್ಕೋಕ್ಕೆ ಹರಿದು ಬರುತ್ತಿದ್ದು,ವಿಶ್ವನಾಯಕರು ನೆರವು ಮತ್ತು ರಕ್ಷಣಾ ತಂಡಗಳನ್ನು ಒದಗಿಸಲು ಮುಂದಾಗಿದ್ದಾರೆ.

ಈ ವರ್ಷದ ಆರಂಭದಲ್ಲಿ ಬೃಹತ್ ಭೂಕಂಪನದಿಂದಾಗಿ ಸಾವಿರಾರು ಜೀವಗಳನ್ನು ಕಳೆದುಕೊಂಡಿರುವ ಟರ್ಕಿಯ ಅಧ್ಯಕ್ಷರು ನೆರವಿಗೆ ಮುಂದಾಗಿರುವವರಲ್ಲಿ ಸೇರಿದ್ದಾರೆ. ಮೊರಾಕ್ಕೋ ಮೂಲದ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಫ್ರಾನ್ಸ್ ಮತ್ತು ಜರ್ಮನಿಗಳೂ ನೆರವಿಗೆ ಮುಂದಾಗಿವೆ. ಉಕ್ರೇನ್ ಮತ್ತು ರಶ್ಯಾಗಳ ನಾಯಕರೂ ಮೊರಾಕ್ಕೋಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೊರಾಕ್ಕೋ ಸರಕಾರವು ನೆರವಿಗಾಗಿ ವಿಧ್ಯುಕ್ತವಾಗಿ ಕೋರಿಕೊಂಡಿಲ್ಲ. ಬಾಹ್ಯ ರಕ್ಷಣಾ ತಂಡಗಳು ಮೊರಾಕ್ಕೋದಲ್ಲಿ ಕಾರ್ಯಾಚರಿಸಲು ಇದು ಅಗತ್ಯವಾಗಿದೆ.

45 ಲಕ್ಷ ಜನರು ವಾಸವಾಗಿರುವ ಮರಕೇಶ್-ಸಫಿ ಪ್ರದೇಶದಲ್ಲಿ ತೀವ್ರ ಹಾನಿ ಮತ್ತು ಸಾವುಗಳು ಸಂಭವಿಸಿವೆ ಎಂದು ಆರಂಭಿಕ ವರದಿಗಳು ತಿಳಿಸಿವೆ.

ತುಲನಾತ್ಮಕವಾಗಿ ಉತ್ತರ ಆಫ್ರಿಕಾದಲ್ಲಿ ಭೂಕಂಪನಗಳು ಸಂಭವಿಸುವುದು ಅಪರೂಪ ಎಂದು ತಿಳಿಸಿದ ರಾಷ್ಟ್ರೀಯ ಭೂಭೌತಶಾಸ್ತ್ರ ಸಂಸ್ಥೆಯ ಭೂಕಂಪನ ನಿಗಾ ಮತ್ತು ಎಚ್ಚರಿಕೆ ವಿಭಾಗದ ಮುಖ್ಯಸ್ಥರಾದ ಲಾಹ್ಸೆನ್ ಮನ್ನಿ ಅವರು,ಇಷ್ಟೊಂದು ಶಕ್ತಿಶಾಲಿ ಭೂಕಂಪನ ಹಿಂದೆಂದೂ ಈ ಪ್ರದೇಶದಲ್ಲಿ ಸಂಭವಿಸಿರಲಿಲ್ಲ ಎಂದರು.

ಶುಕ್ರವಾರ ಮೊರಾಕ್ಕೋದಲ್ಲಿ ಸಂಭವಿಸಿದ ಭೂಕಂಪನ ದೂರದ ಪೋರ್ಚುಗಲ್ ಮತ್ತು ಅಲ್ಜೀರಿಯಾಗಳಲ್ಲಿಯೂ ಅನುಭವವಾಗಿತ್ತು.

1960ರಲ್ಲಿ ಮೊರಾಕ್ಕೋದ ಅಗಾದಿರ್ ಪಟ್ಟಣದಲ್ಲಿ ಸಂಭವಿಸಿದ್ದ 5.8 ತೀವ್ರತೆಯ ಭೂಕಂಪನದಲ್ಲಿ ಸಾವಿರಾರು ಜನರು ಮೃತಪಟ್ಟಿದ್ದರು. ಈ ಭೂಕಂಪನವು ಮೊರಾಕ್ಕೋದಲ್ಲಿ ಕಟ್ಟಡ ನಿರ್ಮಾಣ ನಿಯಮಗಳಲ್ಲಿ ಬದಲಾವಣೆಗಳಿಗೆ ಕಾರಣವಾಗಿತ್ತು. ಆದರೆ ಹಲವು ಕಟ್ಟಡಗಳು,ವಿಶೇಷವಾಗಿ ಗ್ರಾಮೀಣ ಮನೆಗಳನ್ನು ಇಂತಹ ಭೂಕಂಪನದ ಆಘಾತಗಳನ್ನು ತಡೆದುಕೊಳ್ಳಲು ಸಾಧ್ಯವಾಗುವಂತೆ ನಿರ್ಮಿಸಲಾಗಿಲ್ಲ.

ರಾತ್ರಿ 11:11ಕ್ಕೆ ಸಂಭವಿಸಿದ ಭೂಕಂಪವು 6.8ರಷ್ಟು ಪ್ರಾಥಮಿಕ ತೀವ್ರತೆಯನ್ನು ಹೊಂದಿತ್ತು ಮತ್ತು ಹಲವಾರು ಸೆಕೆಂಡ್ಗಳವರೆಗೆ ಭೂಮಿ ಕಂಪಿಸುತ್ತಿತ್ತು. 19 ನಿಮಿಷಗಳ ಬಳಿಕ 4.9 ತೀವ್ರತೆಯ ಪಶ್ಚಾತ್ ಕಂಪನ ಸಂಭವಿಸಿತ್ತು ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೆ ತಿಳಿಸಿದೆ. ಭೂಕಂಪದ ಕೇಂದ್ರಬಿಂದು ಮರಕೇಶ್ನ ದಕ್ಷಿಣದಿಂದ ಸುಮಾರು 70 ಕಿ.ಮೀ.ದೂರದ ಅಲ್ ಹೌಝ್ ಪ್ರಾಂತ್ಯದ ಇಘಿಲ್ ಪಟ್ಟಣದ ಸಮೀಪ ಭೂಮಿಯಿಂದ 18 ಕಿ.ಮೀ.ಆಳದಲ್ಲಿತ್ತು ಎಂದು ಅದು ಹೇಳಿದ್ದರೆ,ಮೊರಾಕ್ಕೋದ ಭೂಕಂಪನ ಶಾಸ್ತ್ರ ಸಂಸ್ಥೆಯು,ಕೇಂದ್ರಬಿಂದು ಭೂಮಿಯಿಂದ 11 ಕಿ.ಮೀ.ಆಳದಲ್ಲಿತ್ತು ಎಂದು ತಿಳಿಸಿದೆ. 70 ಕಿ.ಮೀ.ಗೂ ಕಡಿಮೆ ಆಳದಲ್ಲಿ ಸಂಭವಿಸುವ ಇಂತಹ ಭೂಕಂಪನಗಳು ಹೆಚ್ಚು ಅಪಾಯಕಾರಿಯಾಗಿರುತ್ತವೆ.

ಮರಕೇಶ್ನಲ್ಲಿ 12ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದ ಪ್ರಸಿದ್ಧ ಕೊಟೊಬಿಯಾ ಮಸೀದಿಗೆ ಹಾನಿಯಾಗಿದೆ, ಆದರೆ ಹಾನಿಯ ಪ್ರಮಾಣ ತಕ್ಷಣಕ್ಕೆ ತಿಳಿದುಬಂದಿಲ್ಲ. ಅದರ 69 ಮೀ.(226 ಅಡಿ) ಎತ್ತರದ ಮಿನಾರ್ ‘ಮರಕೇಶ್ನ ಛಾವಣಿ’ ಎಂದೇ ಪ್ರಸಿದ್ಧವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ತಾಣವಾಗಿರುವ ಮರಕೇಶ್ ನಗರವನ್ನು ಸುತ್ತುವರಿದಿರುವ ಪ್ರಸಿದ್ಧ ಕೆಂಪು ಗೋಡೆಯು ಭಾಗಶಃ ಹಾನಿಗೀಡಾಗಿರುವುದನ್ನು ತೋರಿಸುವ ವೀಡಿಯೊಗಳನ್ನು ಅಲ್ಲಿಯ ನಿವಾಸಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಭೂಕಂಪ ಎಲ್ಲ ನೆರವು: ಮೋದಿ ಭರವಸೆ

ಮೊರಾಕ್ಕೋದಲ್ಲಿ ಸಂಭವಿಸಿದ ಭೂಕಂಪನದಲ್ಲಿ ಉಂಟಾಗಿರುವ ಜೀವಹಾನಿಗೆ ಶನಿವಾರ ದುಃಖ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಈ ಸಂಕಷ್ಟದ ಸಮಯದಲ್ಲಿ ದೇಶಕ್ಕೆ ಸಾಧ್ಯವಿರುವ ಎಲ್ಲ ನೆರವನ್ನು ಒದಗಿಸಲು ಭಾರತವು ಸಿದ್ಧವಿದೆ ಎಂದು ಭರವಸೆ ನೀಡಿದರು. ದುರಂತದಲ್ಲಿಯ ಸಂತ್ರಸ್ತರಿಗೆ ಸಂತಾಪಗಳನ್ನು ಸೂಚಿಸುವ ಮೂಲಕ ಜಿ20 ಶೃಂಗಸಭೆಯಲ್ಲಿ ತನ್ನ ಮಾತು ಆರಂಭಿಸಿದ ಮೋದಿ, ‘ಈ ಕಠಿಣ ಸಮಯದಲ್ಲಿ ವಿಶ್ವ ಸಮುದಾಯವು ಮೊರಾಕ್ಕೋದ ಜೊತೆಯಲ್ಲಿದೆ ಮತ್ತು ಆ ದೇಶಕ್ಕೆ ಸಾಧ್ಯವಿರುವ ಎಲ್ಲ ನೆರವನ್ನು ಒದಗಿಸಲು ನಾವು ಸಿದ್ಧರಿದ್ದೇವೆ ’ಎಂದು ಹೇಳಿದರು.

ಇದಕ್ಕೂ ಮುನ್ನ X ಪೋಸ್ಟ್ ನಲ್ಲಿ ಮೋದಿ, ‘ಮೊರಾಕ್ಕೋದಲ್ಲಿ ಭೂಕಂಪನದಿಂದ ಜೀವಹಾನಿಯಿಂದಾಗಿ ತೀವ್ರ ನೋವುಂಟಾಗಿದೆ. ಈ ದುರಂತದ ಸಮಯದಲ್ಲಿ ನನ್ನ ಚಿಂತನೆಗಳು ಮೊರಾಕ್ಕೋ ಜನರೊಂದಿಗಿವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು. ಗಾಯಾಳುಗಳು ಆದಷ್ಟು ಶೀಘ್ರ ಚೇತರಿಸಿಕೊಳ್ಳಲಿ. ಮೊರಾಕ್ಕೋಗೆ ಎಲ್ಲ ನೆರವು ಒದಗಿಸಲು ಭಾರತವು ಸಿದ್ಧವಿದೆ’ ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News