ವಿಶ್ವಸಂಸ್ಥೆಯಿಂದ ಇಕ್ವೆಡಾರ್ ಉಚ್ಛಾಟಿಸಲು ಮೆಕ್ಸಿಕೋ ಆಗ್ರಹ

Update: 2024-04-12 16:56 GMT

Photo : AP

ಮೆಕ್ಸಿಕೋ ಸಿಟಿ : ಕಳೆದ ವಾರ ಇಕ್ವೆಡಾರ್‍ನಲ್ಲಿನ ಮೆಕ್ಸಿಕೋ ದೂತಾವಾಸಕ್ಕೆ ಇಕ್ವೆಡಾರ್‍ನ ಪೊಲೀಸರು ನುಗ್ಗಿರುವುದನ್ನು ಖಂಡಿಸಿ ಮೆಕ್ಸಿಕೋ ಅಂತರಾಷ್ಟೀಯ ನ್ಯಾಯಾಲಯಕ್ಕೆ ದೂರು ನೀಡಿದ್ದು , ಪ್ರಕರಣಕ್ಕೆ ಸಂಬಂಧಿಸಿ ಇಕ್ವೆಡಾರ್ ಅನ್ನು ವಿಶ್ವಸಂಸ್ಥೆಯ ಸಾಮಾನ್ಯ ಸದಸ್ಯತ್ವದಿಂದ ಉಚ್ಛಾಟಿಸುವಂತೆ ಆಗ್ರಹಿಸಿದೆ.

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಇಕ್ವೆಡಾರ್‍ನ ಮಾಜಿ ಉಪಾಧ್ಯಕ್ಷ ಜಾರ್ಜ್ ಗ್ಲಾಸ್ ಮೆಕ್ಸಿಕೋದಲ್ಲಿ ರಾಜಕೀಯ ಆಶ್ರಯ ಕೋರಿದ ಬಳಿಕ ಇಕ್ವೆಡಾರ್‍ನಲ್ಲಿನ ಮೆಕ್ಸಿಕೋ ದೂತಾವಾಸದಲ್ಲಿ ಆಶ್ರಯ ಪಡೆದಿದ್ದರು. ಎಪ್ರಿಲ್ 5ರಂದು ದೂತಾವಾಸಕ್ಕೆ ನುಗ್ಗಿದ್ದ ಇಕ್ವೆಡಾರ್ ಪೊಲೀಸರು ಜಾರ್ಜ್ ಗ್ಲಾಸ್‍ರನ್ನು ಬಂಧಿಸಿ ಕರೆದೊಯ್ದಿದ್ದರು.

ಇದನ್ನು ಖಂಡಿಸಿ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು ಇಕ್ವೆಡಾರ್ ಅನ್ನು ವಿಶ್ವಸಂಸ್ಥೆಯಿಂದ ಉಚ್ಛಾಟಿಸುವಂತೆ ಕೋರಲಾಗಿದೆ. ವಿಶ್ವಸಂಸ್ಥೆ ಸನ್ನದು(ಚಾರ್ಟರ್) ಪ್ರಕಾರ ಉಚ್ಛಾಟನೆಯನ್ನು ಅನುಮೋದಿಸಬೇಕು ಮತ್ತು ಈ ನಿರ್ಣಯಕ್ಕೆ ಯಾರೂ ವೀಟೊ ಪ್ರಯೋಗಿಸಬಾರದು ಎಂದು ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುವೆಲ್ ಲೊಪೆಝ್ ಒಬ್ರಡಾರ್ ಆಗ್ರಹಿಸಿದ್ದಾರೆ. ಕಳೆದ ವಾರದ ದಾಳಿಗೆ ಸಂಬಂಧಿಸಿ ಇಕ್ವೆಡಾರ್ ಕ್ಷಮೆ ಯಾಚಿಸಬೇಕು, ದೂತಾವಾಸಕ್ಕೆ ಸಂಭವಿಸಿದ ಹಾನಿಗೆ ಪರಿಹಾರ ನೀಡಬೇಕು ಮತ್ತು ಮತ್ತೆ ಇದನ್ನು ಮಾಡುವುದಿಲ್ಲ ಎಂಬ ವಾಗ್ದಾನ ನೀಡಬೇಕು ಎಂದು ಮೆಕ್ಸಿಕೋ ಒತ್ತಾಯಿಸಿದೆ.

ಆದರೆ ಕ್ಷಮೆ ಯಾಚಿಸುವ ಪ್ರಶ್ನೆಯೇ ಇಲ್ಲ. ತನ್ನ ಕೃತ್ಯವನ್ನು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ದೇಶ ಸಮರ್ಥಿಸಿಕೊಳ್ಳಲಿದೆ ಎಂದು ಇಕ್ವೆಡಾರ್‍ನ ವಿದೇಶಾಂಗ ಸಚಿವೆ ಗ್ಯಾಬ್ರಿಯೆಲಾ ಸಮರ್‍ಫೀಲ್ಡ್ ಪ್ರತಿಕ್ರಿಯಿಸಿದ್ದಾರೆ. ಈ ಮಧ್ಯೆ, ಇಕ್ವೆಡಾರ್‍ನ ಕೃತ್ಯ ರಾಜತಾಂತ್ರಿಕ ಸಂಬಂಧ ಕುರಿತ ವಿಯೆನ್ನಾ ನಿರ್ಣಯದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವಿದೇಶಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News