ಮೆಕ್ಸಿಕೋ | ಚುನಾವಣಾ ರ‍್ಯಾಲಿಯ ವೇದಿಕೆ ಕುಸಿತ; 9 ಮಂದಿ ಸಾವು

Update: 2024-05-23 15:50 GMT

PC : X/@porktendencia

ಮೆಕ್ಸಿಕೋ ಸಿಟಿ: ಮೆಕ್ಸಿಕೋದಲ್ಲಿ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ರ‍್ಯಾಲಿಯಲ್ಲಿ ವೇದಿಕೆ ಕುಸಿದು ಬಿದ್ದು ಕನಿಷ್ಠ 9 ಮಂದಿ ಸಾವನ್ನಪ್ಪಿದ್ದು ಇತರ ಸುಮಾರು 50 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ನ್ಯುವೊ ಲಿಯೋನ್ ಪ್ರಾಂತದ ಸ್ಯಾನ್ಪೆಡ್ರೋ ಗಾರ್ಝ ಗಾರ್ಸಿಯಾ ನಗರದಲ್ಲಿ ಬುಧವಾರ ದುರ್ಘಟನೆ ಸಂಭವಿಸಿದೆ. ಸಿಟಿಝನ್ಸ್ ಮೂವ್ಮೆಂಟ್ ಪಾರ್ಟಿಯ ಅಧ್ಯಕ್ಷೀಯ ಅಭ್ಯರ್ಥಿ ಜಾರ್ಜ್ ಅಲ್ವಾರೆಝ್ ಮೆಯ್ನೆಝ್ ಹಾಗೂ ಅವರ ಬೆಂಬಲಿಗರು ಚುನಾವಣಾ ರ‍್ಯಾಲಿಯ ಸಂದರ್ಭ ನಿರ್ಮಿಸಲಾಗಿದ್ದ ವೇದಿಕೆಯಲ್ಲಿದ್ದಾಗ ಬೀಸಿದ ಬಿರುಗಾಳಿಯಲ್ಲಿ ವೇದಿಕೆಗೆ ಆಧಾರವಾಗಿ ನಿಲ್ಲಿಸಿದ್ದ ಕಂಬ ಉರುಳಿ ವೇದಿಕೆಯ ಮೇಲಿದ್ದ ಬೃಹತ್ ಸ್ಕ್ರೀನ್ಗೆ ಅಪ್ಪಳಿಸಿದೆ. ಆಗ ಬೆಂಕಿ ಕಾಣಿಸಿಕೊಂಡಿದ್ದು ವೇದಿಕೆ ಕುಸಿದು ಬೀಳುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಓರ್ವ ಬಾಲಕ ಸೇರಿದಂತೆ 9 ಮಂದಿ ಮೃತಪಟ್ಟು ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ಅಧ್ಯಕ್ಷೀಯ ಅಭ್ಯರ್ಥಿ ಅಲ್ವಾರೆಝ್ ಮೆಯ್ನೆಝ್ ಸುರಕ್ಷಿತವಾಗಿದ್ದಾರೆ ಎಂದು ಸ್ಥಳೀಯ ಗವರ್ನರ್ ಸ್ಯಾಮುವೆಲ್ ಗಾರ್ಸಿಯಾ `ಎಕ್ಸ್'(ಟ್ವೀಟ್) ಮಾಡಿದ್ದಾರೆ. ಸಾವು-ನೋವಿಗೆ ಸಂತಾಪ ಸೂಚಿಸುವ ಸಲುವಾಗಿ ಎಲ್ಲಾ ಚುನಾವಣಾ ರ‍್ಯಾಲಿಗಳನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಸಿಟಿಝನ್ಸ್ ಮೂವ್ಮೆಂಟ್ ಪಾರ್ಟಿ ಘೋಷಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News