ಬಾಂಗ್ಲಾದೇಶದ ಪ್ರತಿ ಸಂಸ್ಥೆಯನ್ನೂ ನಾಶಗೊಳಿಸಲಾಗಿದೆ: ಶೇಕ್‌ ಹಸೀನಾ ವಿರುದ್ಧ ಆರೋಪಿಸಿದ ಮುಹಮ್ಮದ್ ಯೂನಸ್

Update: 2024-08-18 14:27 GMT

ಮುಹಮ್ಮದ್ ಯೂನಸ್ (PTI)

ಢಾಕಾ: ಪದಚ್ಯುತ ಪ್ರಧಾನಿ ಶೇಕ್‌ ಹಸೀನಾ ಅವರು ತಾವು ಅಧಿಕಾರದಲ್ಲಿ ಉಳಿಯಲು ದೇಶದ ಪ್ರತಿ ಸಂಸ್ಥೆಗಳನ್ನೂ ನಾಶಗೊಳಿಸಿದ್ದಾರೆ ಎಂದು ರವಿವಾರ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಆರೋಪಿಸಿದ್ದಾರೆ.

ಇದೇ ವೇಳೆ ಮಹತ್ವದ ಸುಧಾರಣೆಗಳನ್ನು ಪೂರ್ಣಗೊಳಿಸಲು ತನ್ನ ಸರಕಾರಕ್ಕೆ ಜನಮತ ದೊರೆತ ಕೂಡಲೇ ಮುಕ್ತ, ನ್ಯಾಯಸಮ್ಮತ ಹಾಗೂ ಎಲ್ಲರ ಸಹಭಾಗಿತ್ವದ ಚುನಾವಣೆಯನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದೂ ಅವರು ಭರವಸೆ ನೀಡಿದ್ದಾರೆ.

ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸುವ ವಿವಾದಾತ್ಮಕ ಮೀಸಲಾತಿ ವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿಗಳು ಭಾರಿ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದ ನಂತರ, 75 ವರ್ಷದ ಶೇಕ್‌ ಹಸೀನಾ ಆಗಸ್ಟ್ 5ರಂದು ಬಾಂಗ್ಲಾದೇಶದಿಂದ ಪರಾರಿಯಾಗಿದ್ದರು.

ಶೇಕ್‌ ಹಸೀನಾ ಪದಚ್ಯುತಗೊಂಡ ನಂತರ, 84 ವರ್ಷದ ಮುಹಮ್ಮದ್ ಯೂನಸ್ ಅವರು ಆಗಸ್ಟ್ 8ರಂದು ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

“ಅವರ ಅಧಿಕಾರದಲ್ಲಿ ಉಳಿಯುವ ಪ್ರಯತ್ನದಲ್ಲಿ, ಶೇಕ್‌ ಹಸೀನಾರ ಸರ್ವಾಧಿಕಾರವು ದೇಶದ ಎಲ್ಲ ಸಂಸ್ಥೆಗಳನ್ನೂ ನಾಶಗೊಳಿಸಿದೆ. ನ್ಯಾಯಾಂಗವು ಮುರಿದು ಬಿದ್ದಿದೆ. ಒಂದೂವರೆ ದಶಕಕ್ಕೂ ಹೆಚ್ಚು ಕಾಲದ ದಬ್ಬಾಳಿಕೆಯ ಮೂಲಕ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹತ್ತಿಕ್ಕಲಾಗಿದೆ” ಎಂದು ತಮ್ಮ ಪತ್ರಿಕಾ ಕಾರ್ಯದರ್ಶಿ ಶಫೀಕುಲ್ ಆಲಂ ಮೂಲಕ ಮುಹಮ್ಮದ್ ಯೂನಸ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ ಎಂದು United News of Bangladesh ಸುದ್ದಿ ಸಂಸ್ಥೆ ವರದಿ ಮಾಡಿದೆ.

ದೇಶದ ಚುಕ್ಕಾಣಿಯನ್ನು ಸಂಪೂರ್ಣ ಅಸ್ತವ್ಯವಸ್ತಗೊಂಡಿರುವ ಸ್ಥಿತಿಯಲ್ಲಿ ಹಿಡಿದಿದ್ದೇನೆ ಎಂದು ಯೂನಸ್ ಹೇಳಿದ್ದಾರೆ.

ಚುನಾವಣಾ ಆಯೋಗ, ನ್ಯಾಯಾಂಗ, ನಾಗರಿಕ ಆಡಳಿತ, ಭದ್ರತಾ ಪಡೆಗಳು ಹಾಗೂ ಮಾಧ್ಯಮಗಳಲ್ಲಿ ಸುಧಾರಣೆಯ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News