ಮಾಸ್ಕೋ ಟೈಮ್ಸ್ `ಅನಪೇಕ್ಷಿತ ಸಂಸ್ಥೆ' : ರಶ್ಯ ಘೋಷಣೆ
ಮಾಸ್ಕೋ: ಉಕ್ರೇನ್ ಯುದ್ಧದ ಕುರಿತ ವರದಿಗಾಗಿ `ಮಾಸ್ಕೋ ಟೈಮ್ಸ್' ಅನ್ನು ಅನಪೇಕ್ಷಿತ ಸಂಸ್ಥೆಯೆಂದು ಘೋಷಿಸಿರುವುದಾಗಿ ರಶ್ಯ ಗುರುವಾರ ಪ್ರಕಟಿಸಿದೆ.
ಈ ಕ್ರಮವು ಪತ್ರಕರ್ತರು ಮತ್ತು ಪ್ರಕಟಣಾ ಸಂಸ್ಥೆಗೆ ಸಂಬಂಧಿಸಿದ ವ್ಯಕ್ತಿಗಳನ್ನು ರಶ್ಯದಲ್ಲಿ ಕ್ರಿಮಿನಲ್ ವಿಚಾರಣೆಗೆ ಒಳಪಡಿಸಲಿದೆ ಮತ್ತು ರಶ್ಯದಲ್ಲಿ ವರದಿ ಪ್ರಕಟಣೆಯನ್ನು ನಿಷೇಧಿಸಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ `ದಿ ಮಾಸ್ಕೋ ಟೈಮ್ಸ್' ಸ್ಥಾಪಕ ಡೆರ್ಕ್ ಸಾವರ್ `ಪುಟಿನ್ ಅವರ ರಶ್ಯದಲ್ಲಿ ಅಪರಾಧವಾಗಿರುವ ಸ್ವತಂತ್ರ ಪತ್ರಿಕೋದ್ಯಮವನ್ನು ನಾವು ಖಂಡಿತಾ ಮುಂದುವರಿಸಲಿದ್ದೇವೆ' ಎಂದಿದ್ದಾರೆ. ಇಂಗ್ಲಿಷ್ ಭಾಷೆಯ `ಮಾಸ್ಕೋ ಟೈಮ್ಸ್'ನ ಉದ್ದೇಶವು ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸುವ ನಮ್ಮ ದೇಶದ ಸರಕಾರಿ ಅಧಿಕಾರಿಗಳ ಚಟುವಟಿಕೆಗಳನ್ನು ಅಪಖ್ಯಾತಿಗೊಳಿಸುವ ಗುರಿಯನ್ನು ಹೊಂದಿದೆ ಎಂದು ರಶ್ಯದ ಪ್ರಾಸಿಕ್ಯೂಟರ್ ಜನರಲ್ ಕಚೇರಿ ಹೇಳಿದೆ.
ಮಿಲಿಟರಿ ಕಾರ್ಯಾಚರಣೆಗಳಿಗೆ `ಕಳಂಕ' ತರುವುದು ಕ್ರಿಮಿನಲ್ ಅಪರಾಧವೆಂದು ರಶ್ಯದ ಸಂಸತ್ ಅನುಮೋದಿಸಿದ ಬಳಿಕ `ದಿ ಮಾಸ್ಕೋ ಟೈಮ್ಸ್' ತನ್ನ ಕಚೇರಿಯನ್ನು ರಶ್ಯದಿಂದ ಸ್ಥಳಾಂತರಿಸಿದೆ. ಮತ್ತೊಂದು ಪ್ರಮುಖ ಮಾಧ್ಯಮ ಸಂಸ್ಥೆ ಬ್ಲೂಮ್ಬರ್ಗ್ ನ್ಯೂಸ್ ಕೂಡಾ ರಶ್ಯದಿಂದ ಹೊರತೆರಳಿದೆ, ಆದರೂ ಯುದ್ಧ ಮತ್ತು ಅದರ ಪರಿಣಾಮಗಳ ಕುರಿತು ವರದಿ ಮಾಡುವುದನ್ನು ಮುಂದುವರಿಸಿದೆ. `ವಾಲ್ ಸ್ಟ್ರೀಟ್ ಜರ್ನಲ್'ನ ವರದಿಗಾರ ಇವಾನ್ ಗೆರ್ಷ್ಕೊವಿಚ್ ರಶ್ಯದಲ್ಲಿ ಬಂಧನದಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾರೆ.
ಸೋವಿಯತ್ ಒಕ್ಕೂಟ ಪತನಗೊಂಡ ಬಳಿಕ 1992ರಲ್ಲಿ ರಶ್ಯದಲ್ಲಿ ಪ್ರಕಟಣೆ ಆರಂಭಿಸಿದ್ದ `ದಿ ಮಾಸ್ಕೋ ಟೈಮ್ಸ್' 2017ರಲ್ಲಿ ಆನ್ಲೈನ್ ಸುದ್ದಿ ಮಾಧ್ಯಮವಾಗಿ ಬದಲಾಗಿತ್ತು. ಇದನ್ನು `ವಿದೇಶಿ ಏಜೆಂಟ್' ಎಂದು ಕಳೆದ ವರ್ಷ ರಶ್ಯದ ನ್ಯಾಯ ಇಲಾಖೆ ಹೆಸರಿಸಿತ್ತು.