ನಮೀಬಿಯಾದಲ್ಲಿ ತೀವ್ರ ಬರಗಾಲ | ಆಹಾರಕ್ಕಾಗಿ 83 ಆನೆಗಳು ಸೇರಿದಂತೆ 723 ವನ್ಯಜೀವಿಗಳನ್ನು ಕೊಲ್ಲಲು ನಿರ್ಧಾರ

Update: 2024-08-28 05:49 GMT

ಸಾಂದರ್ಭಿಕ ಚಿತ್ರ (PTI)

ವಿಂಡ್‌ಹೋಕ್ : ತೀವ್ರ ಬರಗಾಲದಿಂದ ತತ್ತರಿಸಿರುವ ನಮೀಬಿಯಾವು ಆಹಾರಕ್ಕಾಗಿ 83 ಆನೆಗಳು ಸೇರಿದಂತೆ 723 ಕಾಡು ಪ್ರಾಣಿಗಳನ್ನು ಕೊಲ್ಲಲು ನಿರ್ಧರಿಸಿದೆ. ಆ ಮೂಲಕ ಆಹಾರಕ್ಕಾಗಿ ಹೆಣಗಾಡುತ್ತಿರುವ ಜನರಿಗೆ ಮಾಂಸವನ್ನು ವಿತರಿಸಲಿದೆ ಎಂದು ಪರಿಸರ ಸಚಿವಾಲಯ ತಿಳಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಲಭ್ಯವಿರುವ ಹುಲ್ಲುಗಾವಲು ಮತ್ತು ನೀರಿನ ಸರಬರಾಜನ್ನು ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಗಳಿರುವ ಉದ್ಯಾನವನಗಳಲ್ಲಿ ಪ್ರಾಣಿಗಳನ್ನು ಕೊಲ್ಲಲಾಗುವುದು ಎಂದು ಎಂದು ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಪರಿಸರ ಸಚಿವಾಲಯವು ತಿಳಿಸಿದೆ. "ನಮ್ಮ ಸಾಂವಿಧಾನಿಕ ಆದೇಶಕ್ಕೆ ಅನುಗುಣವಾಗಿ, ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ನಮೀಬಿಯಾದ ನಾಗರಿಕರ ಅನುಕೂಲಕ್ಕಾಗಿ ಬಳಸಲಾಗುತ್ತದೆ" ಎಂದು ಪರಿಸರ ಸಚಿವಾಲಯ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

ವಿಶ್ವಸಂಸ್ಥೆಯ ಪ್ರಕಾರ, ದಕ್ಷಿಣ ಆಫ್ರಿಕಾವು ದಶಕಗಳಲ್ಲಿ ತನ್ನ ಭೀಕರ ಬರವನ್ನು ಎದುರಿಸುತ್ತಿದೆ. ಕಳೆದ ತಿಂಗಳು ನಮೀಬಿಯಾ ತನ್ನಲ್ಲಿರುವ ಆಹಾರ ಭದ್ರತೆಯ ಶೇ.84ರ ಮಟ್ಟವನ್ನು ಈಗಾಗಲೇ ಮೀರಿದೆ. ನಮೀಬಿಯಾದ ಜನಸಂಖ್ಯೆಯ ಅರ್ಧದಷ್ಟು ಜನರು ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನ ಮಟ್ಟದ ಆಹಾರ ಕೊರತೆಯನ್ನು ಎದುರಿಸಲಿದ್ದಾರೆ ಎನ್ನಲಾಗಿದೆ.

ಇಂತಹ ಭೀಕರ ಬರಗಾಲದಲ್ಲಿ ಪ್ರಾಧಿಕಾರಗಳು ಮಧ್ಯಪ್ರವೇಶಿಸದಿದ್ದರೆ ಮಾನವ-ವನ್ಯಜೀವಿ ಸಂಘರ್ಷಗಳು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಪರಿಸರ ಸಚಿವಾಲಯ ತಿಳಿಸಿದೆ. "ಈಗಾಗಲೇ ಗುರುತಿಸಲಾಗಿರುವ ಮಾನವ – ವನ್ಯಜೀವಿ ಸಂಘರ್ಷದ ಪ್ರದೇಶಗಳಲ್ಲಿ 83 ಆನೆಗಳನ್ನು ಕೊಲ್ಲಲಾಗುವುದು. ಅದರ ಮಾಂಸವನ್ನು ಬರಗಾಲ ಪೀಡಿತ ಪ್ರದೇಶಗಳಲ್ಲಿ ಹಂಚಲಾಗುತ್ತದೆ" ಎಂದು ಸಚಿವಾಲಯ ಹೇಳಿದೆ.

ತಾತ್ಕಾಲಿಕ ಪರಿಹಾರದ ಭಾಗವಾಗಿ, ದೇಶವು 30 ನೀರುಕುದುರೆಗಳು ಮತ್ತು 60 ಎಮ್ಮೆಗಳನ್ನು ಕೊಲ್ಲಲು ಯೋಜಿಸಿದೆ. ಜೊತೆಗೆ 50 ಆಫ್ರಿಕನ್ ಜಿಂಕೆ, 100 ನೀಲಿ ಕಾಡಾನೆ, 300 ಝೀಬ್ರಾ ಮತ್ತು 100 ಎಲ್ಯಾಂಡ್‌ಗಳನ್ನು ಕೊಲ್ಲಲು ಯೋಜಿಸಿದೆ.

ನೂರೈವತ್ತೇಳು ಪ್ರಾಣಿಗಳನ್ನು ಈಗಾಗಲೇ ವೃತ್ತಿಪರ ಬೇಟೆಗಾರರು ಮತ್ತು ಸರ್ಕಾರದಿಂದ ಗುತ್ತಿಗೆ ಪಡೆದ ಕಂಪೆನಿಗಳು ಬೇಟೆಯಾಡಿದ್ದು, 56,800 ಕಿಲೋಗ್ರಾಂಗಳಿಗಿಂತ ಹೆಚ್ಚಿನ ತೂಕದ ಮಾಂಸವನ್ನು ಆಹಾರಕ್ಕಾಗಿ ಬಳಸಲಾಗಿದೆ.

ದಕ್ಷಿಣ ಆಫ್ರಿಕಾದ ಐದು ದೇಶಗಳಾದ ಝಿಂಬಾಬ್ವೆ, ಝಾಂಬಿಯಾ, ಬೋಟ್ಸ್ವಾನ, ಅಂಗೋಲಾ ಮತ್ತು ನಮೀಬಿಯಾಗಳಲ್ಲಿರುವ ಸಂರಕ್ಷಣಾ ಪ್ರದೇಶದಲ್ಲಿ 200,000 ಕ್ಕೂ ಹೆಚ್ಚು ಆನೆಗಳು ವಾಸಿಸುತ್ತವೆ ಎಂದು ಅಂದಾಜಿಸಲಾಗಿದೆ. ಈ ಪ್ರದೇಶವು ವಿಶ್ವದಲ್ಲೇ ಅತೀ ಹೆಚ್ಚಿನ ಆನೆಗಳನ್ನು ಹೊಂದಿದೆ. ಕಳೆದ ವರ್ಷ ಬೋಟ್ಸ್ವಾನಾ ಮತ್ತು ಝಿಂಬಾಬ್ವೆಯಲ್ಲಿ ಬರಗಾಲದಿಂದಾಗಿ ನೂರಾರು ಆನೆಗಳು ಸಾವನ್ನಪ್ಪಿದ್ದವು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News