ಬ್ರೂನೈಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
ಬಂದರ್ ಸೆರಿ ಬೇಗವಾನ್ : ಬ್ರೂನೈಗೆ ಎರಡು ದಿನದ ಭೇಟಿಗಾಗಿ ಮಂಗಳವಾರ ಬ್ರೂನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಆತ್ಮೀಯ ಸ್ವಾಗತ ದೊರೆಯಿತು.
ಬ್ರೂನೈಯ ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ ಅವರ ಆಹ್ವಾನದ ಮೇರೆಗೆ ಮೋದಿ ಬ್ರೂನೈಗೆ ಆಗಮಿಸಿದ್ದಾರೆ. ನಮ್ಮ ರಾಜತಾಂತ್ರಿಕ ಸಂಬಂಧದ 40 ವರ್ಷಗಳ ಸಂಭ್ರಮಾಚರಣೆಯಲ್ಲಿ ನಮ್ಮ ಐತಿಹಾಸಿಕ ಸಂಬಂಧವನ್ನು ಹೊಸ ಎತ್ತರಕ್ಕೆ ಏರಿಸಲು ಇದೊಂದು ಸುಸಂದರ್ಭವಾಗಿದೆ ಎಂದು ಮೋದಿ ಹೇಳಿದ್ದಾರೆ.
ಬ್ರೂನೈಗೆ ಭಾರತೀಯ ಪ್ರಧಾನಿಯ ಮೊದಲ ದ್ವಿಪಕ್ಷೀಯ ಪ್ರವಾಸ ಇದಾಗಿದ್ದು ಉಭಯ ದೇಶಗಳ ಬಾಂಧವ್ಯವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ. ರಾಜಧಾನಿಯಲ್ಲಿರುವ ಒಮರ್ ಅಲಿ ಸಫೀಯುದ್ದೀನ್ ಮಸೀದಿಗೆ ಭೇಟಿ ನೀಡಿದ ಬಳಿಕ ಬ್ರೂನೈಯಲ್ಲಿ ಭಾರತದ ಹೈಕಮಿಷನ್‍ನ ನೂತನ ಮುಖ್ಯ ಕಚೇರಿಯನ್ನು ಉದ್ಘಾಟಿಸಿದರು. ಭಾರತೀಯ ಸಮುದಾಯದವರು ಈ ಸಂದರ್ಭ ಉಪಸ್ಥಿತರಿದ್ದರು.
ರಕ್ಷಣೆ, ವ್ಯಾಪಾರ ಮತ್ತು ಹೂಡಿಕೆ, ಇಂಧನ, ಬಾಹ್ಯಾಕಾಶ ತಂತ್ರಜ್ಞಾನ, ಆರೋಗ್ಯ, ಸಾಮಥ್ರ್ಯ ವರ್ಧನೆ, ಸಂಸ್ಕøತಿ ಮತ್ತು ಜನರಿಂದ ಜನರ ವಿನಿಮಯದಂತಹ ಹಲವು ಹೊಸ ಕ್ಷೇತ್ರಗಳಲ್ಲಿ ಸಹಕಾರವನ್ನು ಅನ್ವೇಷಿಸುವ ನಿಟ್ಟಿನಲ್ಲಿ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಿ ಪಾಲ್ಗೊಳ್ಳುತ್ತಾರೆ. ಕಳೆದ ತಿಂಗಳು ವಿದೇಶಾಂಗ ಸಚಿವ ಎಸ್. ಜೈಶಂಕರ್ ಲಾವೋಸ್‍ನಲ್ಲಿ ನಡೆದಿದ್ದ ಆಸಿಯಾನ್ ಶೃಂಗಸಭೆಯ ನೇಪಥ್ಯದಲ್ಲಿ ಬ್ರೂನೈ ವಿದೇಶಾಂಗ ಸಚಿವ ಎರಿವಾನ್ ಪೆಹಿನ್ ಯೂಸುಫ್‍ರನ್ನು ಭೇಟಿಯಾಗಿದ್ದು ಉಭಯ ದೇಶಗಳ ರಾಜತಾಂತ್ರಿಕ ಸಂಬಂಧಗಳ 40ನೇ ವರ್ಷದ ಸಂಭ್ರಮಾಚರಣೆಯ ಲೋಗೋವನ್ನು ಜಂಟಿಯಾಗಿ ಉದ್ಘಾಟಿಸಿದ್ದರು. 2014ರಲ್ಲಿ ಮ್ಯಾನ್ಮಾರ್‍ನಲ್ಲಿ ನಡೆದಿದ್ದ 25ನೇ ಆಸಿಯಾನ್ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ಮೋದಿ ಬ್ರೂನೈ ಸುಲ್ತಾನರನ್ನು ಮೊದಲ ಬಾರಿ ಭೇಟಿ ಮಾಡಿದ್ದರು. 2017ರಲ್ಲಿ ಮನಿಲಾದಲ್ಲಿ ನಡೆದ ಪೂರ್ವ ಏಶ್ಯಾ ಶೃಂಗಸಭೆಯಲ್ಲಿ ದ್ವಿತೀಯ ಭೇಟಿ ನಡೆದಿತ್ತು.