ಬಾಹ್ಯಾಕಾಶದಿಂದ ನೇರ ಪ್ರಸಾರದಲ್ಲಿ ಮಾತನಾಡಲಿರುವ ನಾಸಾ ಗಗನ ಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್

Update: 2024-09-13 13:42 GMT

ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ | PC: X

ವಾಷಿಂಗ್ಟನ್ : ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಿಸ್ತರಿತ ವಾಸ್ತವ್ಯ ಹೂಡಿದಾಗಿನಿಂದ ಇದೇ ಪ್ರಥಮ ಬಾರಿಗೆ ನಾಸಾ ಗಗನ ಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅವರು ಶುಕ್ರವಾರ ರಾತ್ರಿ ಭಾರತೀಯ ಕಾಲಮಾನ 11.45ಕ್ಕೆ ಬಾಹ್ಯಾಕಾಶದಿಂದ ತಮ್ಮ ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಜೂನ್ 5, 2024ರಂದು ಬೋಯಿಂಗ್ ನ ಸ್ಟಾರ್ ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರನ್ನು ಬಾಹ್ಯಾಕಾಶಕ್ಕೆ ಉಡಾಯಿಸಲಾಗಿತ್ತು. ಅವರ ಈ ಕಾರ್ಯಾಚರಣೆಯ ಅವಧಿ ಮೂಲತಃ ಎಂಟು ದಿನಗಳದ್ದಾಗಿತ್ತು. ಆದರೆ, ಸ್ಟಾರ್ ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಬಾಹ್ಯಾಕಾಶ ಸಿಬ್ಬಂದಿಗಳಿಲ್ಲದೆ ಸ್ಟಾರ್ ಲೈನರ್ ಬಾಹ್ಯಾಕಾಶ ನೌಕೆಯನ್ನು ನಾಸಾ ಭೂಮಿಗೆ ವಾಪಸು ಕರೆಸಿಕೊಂಡಿತ್ತು. ಇದರಿಂದಾಗಿ ಗಗನ ಯಾತ್ರಿಗಳಾದ ವಿಲಿಯಮ್ಸ್ ಹಾಗೂ ವಿಲ್ಮೋರ್ ಫೆಬ್ರವರಿ 2025ರವರೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ವಾಸ್ತವ್ಯ ಹೂಡಬೇಕಾಗಿ ಬಂದಿತ್ತು.

ರಾತ್ರಿಯ ನೇರ ಪ್ರಸಾರದಲ್ಲಿ ಗಗನ ಯಾತ್ರಿಗಳಿಬ್ಬರೂ ತಮ್ಮ ವೈಜ್ಞಾನಿಕ ಸಂಶೋಧನೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ತಮ್ಮ ಜೀವನ ಹಾಗೂ ಈ ಕಾರ್ಯಾಚರಣೆಯಲ್ಲಿನ ವಿಸ್ತರಿತ ಅವಧಿಯ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ನಿರೀಕ್ಷೆ ಇದೆ. ಈ ನೇರ ಪ್ರಸಾರವು ಗಗನಯಾತ್ರಿಗಳ ಕೆಲಸ ಹಾಗೂ ಬಾಹ್ಯಾಕಾಶದಲ್ಲಿನ ವಿಸ್ತರಿತ ವಾಸ್ತವ್ಯದಲ್ಲಿ ಅವರ ಸ್ವಾಸ್ಥದ ಕುರಿತು ಖುದ್ದು ವಿವರಣೆ ಕೇಳುವ ಅಪರೂಪದ ಅವಕಾಶವನ್ನು ಈ ನೇರ ಪ್ರಸಾರವು ಸಾರ್ವಜನಿಕರಿಗೆ ಒದಗಿಸಲಿದೆ.

ಮಹತ್ವದ ಬೆಳವಣಿಗೆಯೊಂದರಲ್ಲಿ, ನಾಸಾ ಗಗನ ಯಾತ್ರಿಗಳಾದ ಡಾನ್ ಪೆಟಿಟ್ ಮತ್ತು ರಾಸ್ಕೊಮಾಸ್, ಅಲೆಕ್ಸಿ ಓವ್ಚಿನಿನ್ ಮತ್ತು ಐವಾನ್ ವಾಂಗರ್ ಇತ್ತೀಚೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪುವುದರೊಂದಿಗೆ ಅದು ಮತ್ತಷ್ಟು ವಿಸ್ತರಣೆಗೊಂಡಿದೆ. 2025ರ ಫೆಬ್ರುವರಿವರೆಗೆ ನೂತನ ತಂಡವು ವಿಲಿಯಮ್ಸ್ ಮತ್ತು ವಿಲ್ಮೋರ್ ಅವರೊಂದಿಗೆ ಕೆಲಸ ಮಾಡಲಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ವೈಜ್ಞಾನಿಕ ಸಾಹಸಗಳಿಗೆ ಕೊಡುಗೆ ನೀಡಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News