“ಪೂರ್ಣ ವಿಜಯ ಸಾಧಿಸುವವರೆಗೆ ಗಾಝಾ ಮೇಲಿನ ದಾಳಿ ಮುಂದುವರಿಯಲಿದೆ”: ಅಮೆರಿಕ ಕಾಂಗ್ರೆಸ್ ನಲ್ಲಿ ನೆತನ್ಯಾಹು ಭಾಷಣ
ವಾಷಿಂಗ್ಟನ್ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಅಮೆರಿಕ ಕಾಂಗ್ರೆಸ್ ನಲ್ಲಿ ಮಾಡಿದ ಭಾಷಣದಲ್ಲಿ, ಗಾಝಾ ಯುದ್ಧದ ಬಗೆಗಿನ ಇಸ್ರೇಲ್ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡರು. ನೆತನ್ಯಾಹು ನಿಲುವನ್ನು ಖಂಡಿಸಿ ಅಗ್ರಗಣ್ಯ ಡೆಮಾಕ್ರಟಿಕ್ ಸಂಸದರು ಸಭೆ ಬಹಿಷ್ಕರಿಸಿದರು ಮತ್ತು ಸಾವಿರಾರು ಮಂದಿ ಪ್ರತಿಭಟನಾಕಾರರು ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಿದರು. ಈ ಭೀಕರ ಸಂಘರ್ಷ ಮಾನವೀಯ ಸಂಘರ್ಷಕ್ಕೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.
ಗಾಝಾ ಯುದ್ಧಕ್ಕೆ ಒಂಬತ್ತು ತಿಂಗಳು ಕಳೆದಿದ್ದು, ಪರಿಪೂರ್ಣ ವಿಜಯ ಸಾಧಿಸುವವರೆಗೆ ಇದು ಮುಂದುವರಿಯಲಿದೆ ಎಂದು ನೆತನ್ಯಾಹು ಸ್ಪಷ್ಟಪಡಿಸಿದರು. ಹಮಾಸ್ ಮತ್ತು ಇತರ ಇರಾನ್ ಬೆಂಬಲಿತ ಗುಂಪುಗಳ ವಿರುದ್ಧ ಅಮೆರಿಕದ ಬೆಂಬಲದ ಅಪೇಕ್ಷೆಯನ್ನು ಒತ್ತಿ ಹೇಳಿದ ಅವರು, ಅಮೆರಿಕದಲ್ಲಿ ಈ ಬಗ್ಗೆ ವ್ಯಕ್ತವಾಗುತ್ತಿರುವ ವಿರೋಧವನ್ನು ಖಂಡಿಸಿದರು.
"ಅಮೆರಿಕ ಮತ್ತು ಇಸ್ರೇಲ್ ಒಂದಾಗಿ ನಿಲ್ಲಬೇಕು. ಒಗ್ಗಟ್ಟಾಗಿ ನಿಂತಾಗ ನಿಜವಾಗಿ ಸರಳ ಘಟನೆಗಳಾಗುತ್ತವೆ. ನಾವು ಗೆಲ್ಲುತ್ತೇವೆ. ಅವರು ಸೋಲುತ್ತಾರೆ" ಎಂದರು. ಹಮಾಸ್ ಹಿಡಿದಿಟ್ಟಿರುವ ಇಸ್ರೇಲಿ ಒತ್ತೆಯಾಳುಗಳಿಗೆ ಬೆಂಬಲಾರ್ಥವಾಗಿ ನೆತನ್ಯಾಹು ಹಳದಿ ಬಣ್ಣದ ಪಿನ್ ಧರಿಸಿದ್ದರು.
ನೆತನ್ಯಾಹು ಭಾಷಣವನ್ನು ವಿರೋಧಿಸಿ ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಿದ ಸಾವಿರಾರು ಮಂದಿಯನ್ನು ಮತ್ತು ಇಸ್ರೇಲ್ ವಿರುದ್ಧ ವಾದ ಮಂಡಿಸುವವರನ್ನು ಬುದ್ಧಿಗೇಡಿಗಳು ಎಂದ ನೆತನ್ಯಾಹು, ಹೊರಗೆ ಪ್ರತಿಭಟನೆ ನಡೆಸುತ್ತಿರುವ ಡೆಮಾಕ್ರಟಿಕ್ ಸದಸ್ಯರು ಉಗ್ರಗಾಮಿಗಳ ಬೆಂಬಲಿಗರು ಎಂದು ಟೀಕಿಸಿದರು. ಇಸ್ರೇಲ್ ವಿರೋಧಿ ಪ್ರತಿಭಟನಾಕಾರರು ಅನಿಷ್ಠದ ಪರ ನಿಲುವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಅವರ ಪರ ನಿಲುವು ಹೊಂದಿರುವ ಪ್ರತಿಭಟನಾಕಾರರಿಗೆ ತಮ್ಮ ಬಗ್ಗೆಯೇ ನಾಚಿಕೆಯಾಗಬೇಕು ಎಂದರು.
ಸದನದ ಸ್ಪೀಕರ್ ಮೈಕ್ ಜಾನ್ಸನ್ ಮತ್ತು ರಿಪಬ್ಲಿಕನ್ ಪಕ್ಷದ ಇತರರು ನೆತನ್ಯಾಹು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಯಾವತ್ತೂ ಅಮೆರಿಕ ಇಸ್ರೇಲ್ ಜತೆಗೆ ಹೆಗಲಿಗೆ ಹೆಗಲು ಕೊಟ್ಟು ಮುಂದುವರಿಯಬೇಕು ಎಂದು ಅವರು ಆಶಿಸಿದರು.
ಗಾಝಾ ಯುದ್ಧ ಸಮರ್ಥಿಸಿಕೊಂಡ ಇಸ್ರೇಲ್ ಪ್ರಧಾನಿ ನೆತನ್ಯಾಹು
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಅಮೆರಿಕ ಕಾಂಗ್ರೆಸ್‌ನಲ್ಲಿ ಮಾಡಿದ ಭಾಷಣದಲ್ಲಿ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು `ನಮ್ಮ ಶತ್ರುಗಳು ನಿಮಗೂ ಶತ್ರುಗಳಾಗಿದ್ದಾರೆ. ಆದ್ದರಿಂದ ನಮ್ಮ ಗೆಲುವು ನಿಮ್ಮದೂ ಗೆಲುವಾಗಲಿದೆ' ಎಂದು ಪ್ರತಿಪಾದಿಸಿದರು.
ಇಸ್ರೇಲ್ ವಿರುದ್ಧವಿರುವ ಗುಂಪುಗಳಿಗೆ ಆರ್ಥಿಕ ನೆರವು ಮತ್ತು ಬೆಂಬಲ ಒದಗಿಸುತ್ತಿರುವುದಕ್ಕೆ ಇರಾನ್ ಅನ್ನು ಖಂಡಿಸಿದ ನೆತನ್ಯಾಹು, ಕ್ರೂರ ಶತ್ರುಗಳನ್ನು ಸೋಲಿಸಲು ಧೈರ್ಯ ಮತ್ತು ಸ್ಪಷ್ಟತೆ ಎರಡೂ ಅಗತ್ಯ ಎಂದರು.
ಇರಾನ್ ಪ್ರತಿಪಾದಿಸುತ್ತಿರುವ ಪ್ರತಿರೋಧ ಒಕ್ಕೂಟವನ್ನು `ಭಯೋತ್ಪಾದನೆಯ ಒಕ್ಕೂಟ'ವೆಂದು ಟೀಕಿಸಿದ ನೆತನ್ಯಾಹು, ನಾಗರಿಕತೆಗಳ ವಿರುದ್ಧ ಅನಾಗರಿಕತೆಯ ಘರ್ಷಣೆಯ ಮೂಲಕ ಈ ಒಕ್ಕೂಟವು ಅಮೆರಿಕ, ಇಸ್ರೇಲ್ ಮತ್ತು ಅರಬ್ ಜಗತ್ತಿಗೆ ಬೆದರಿಕೆ ಒಡ್ಡಿದೆ ಎಂದರು.
ಇರಾನ್‌ನ ಛಾಯಾ ಪಡೆಗಳು ಅಮೆರಿಕನ್ ಗುರಿಗಳ ಮೇಲೆ ದಾಳಿ ನಡೆಸಿವೆ. ಅಮೆರಿಕಕ್ಕೆ ನಿಜವಾಗಿಯೂ ಸವಾಲು ಹಾಕಬೇಕಿದ್ದರೆ ಮೊದಲು ಮಧ್ಯಪ್ರಾಚ್ಯವನ್ನು ವಶಪಡಿಸಿಕೊಳ್ಳಬೇಕು ಎಂಬುದು ಇರಾನ್‌ನ ನಿಲುವಾಗಿದೆ. ಆದರೆ ಮಧ್ಯಪ್ರಾಚ್ಯದ ಹೃದಯದಲ್ಲಿ, ಇರಾನ್‌ನ ಮಾರ್ಗಕ್ಕೆ ಅಡ್ಡವಾಗಿ ನಿಂತಿರುವ ಅಮೆರಿಕನ್ ಪ್ರಜಾಪ್ರಭುತ್ವದ ಪರ ಇರುವ ಒಂದು ದೇಶವೆಂದರೆ ಅದು ಇಸ್ರೇಲ್' ಎಂದ ನೆತನ್ಯಾಹು, ಗಾಝಾದ ಯುದ್ಧ ಇಸ್ರೇಲ್‌ನ ಉಳಿವಿಗಾಗಿ ನಡೆಸುವ ಯುದ್ಧವೆಂದು ಪ್ರತಿಪಾದಿಸಿದರು ಮತ್ತು ಅಮೆರಿಕದ ಮತ್ತಷ್ಟು ಮಿಲಿಟರಿ ನೆರವನ್ನು ಕೋರಿದರು. ನೆತನ್ಯಾಹು ಭಾಷಣಕ್ಕೆ ಡೆಮಾಕ್ರಟಿಕ್ ಪಕ್ಷದ ಹತ್ತಕ್ಕೂ ಹೆಚ್ಚು ಸಂಸದರು ಗೈರು ಹಾಜರಾಗಿದ್ದರು ಎಂದು ವರದಿಯಾಗಿದೆ. ಈ ಮಧ್ಯೆ, ಕಾಂಗ್ರೆಸ್‌ನಲ್ಲಿ ನೆತನ್ಯಾಹು ಭಾಷಣ ಮಾಡುವುದನ್ನು ವಿರೋಧಿಸಿ ಪ್ರತಿಭಟನಾಕಾರರು ಸಂಸತ್ ಭವನದ ಎದುರು ಮತ್ತು ವಾಷಿಂಗ್ಟನ್ ಯೂನಿಯನ್ ಸ್ಟೇಷನ್‌ನ ಹೊರಗಡೆ ಪ್ರತಿಭಟನೆ ನಡೆಸಿದರು. ಅಮೆರಿಕದ ಧ್ವಜಕ್ಕೆ ಬೆಂಕಿ ಹಚ್ಚಿ ಫೆಲೆಸ್ತೀನ್ ಧ್ವಜವನ್ನು ಅರಳಿಸಿದರು ಮತ್ತು ಇಸ್ರೇಲ್‌ಗೆ ಅಮೆರಿಕದ ಮಿಲಿಟರಿ ನೆರವನ್ನು ಕೊನೆಗೊಳಿಸಬೇಕು ಎಂದು ಆಗ್ರಹಿಸಿದರು. ನೆತನ್ಯಾಹು ಭಾಷಣಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದ 5 ಮಂದಿಯನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.