ಇಸ್ಮಾಯಿಲ್ ಹನಿಯೆಹ್ ಹತ್ಯೆಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು: ಹಮಾಸ್ ಶಪಥ
ಟೆಹ್ರಾನ್/ಗಾಝಾ: ಫೆಲೆಸ್ತೀನ್ ಹೋರಾಟದ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಹತ್ಯೆಗೆ ತಕ್ಕ ಪ್ರತ್ಯುತ್ತರ ನೀಡದೆ ಬಿಡುವುದಿಲ್ಲ ಎಂದು ಬುಧವಾರ ಹಿರಿಯ ಹಮಾಸ್ ಅಧಿಕಾರಿಯೊಬ್ಬರು ಶಪಥ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಹಮಾಸ್ ರಾಜಕೀಯ ದಳದ ಸದಸ್ಯ ಮೂಸಾ ಅಬು ಮರ್ಝುಕ್, “ಇಸ್ಮಾಯಿಲ್ ಹನಿಯೆಹ್ ಅವರ ಹತ್ಯೆ ಹೇಡಿತನದ್ದಾಗಿದ್ದು, ಅದಕ್ಕೆ ಪ್ರತ್ಯುತ್ತರ ನೀಡದೆ ಬಿಡುವುದಿಲ್ಲ” ಎಂದು ಎಚ್ಚರಿಸಿದ್ದಾರೆ.
ಇರಾನ್ ದೇಶದ ನೂತನ ಅಧ್ಯಕ್ಷರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ತೆರಳಿದ್ದಾಗ, ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ರಾಜಕೀಯ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆಯಾಗಿದ್ದಾರೆ ಎಂದು ಬುಧವಾರ ಹಮಾಸ್ ಪ್ರಕಟಿಸಿದೆ.
ಇಸ್ರೇಲ್ ಹಿಡಿತದಲ್ಲಿದ್ದ ಗೋಲನ್ ಹೈಟ್ಸ್ ಮೇಲೆ ವಾರಾಂತ್ಯದಲ್ಲಿ ನಡೆದಿದ್ದ ಕ್ಷಿಪಣಿ ದಾಳಿಯ ಹೊಣೆಗಾರ ಎಂದು ಹೇಳಲಾಗಿದ್ದ ಇರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪಿನ ಹಿರಿಯ ಕಮಾಂಡರ್ ಅನ್ನು ಮಂಗಳವಾರ ಹಿಜ್ಬುಲ್ಲಾ ಭದ್ರಕೋಟೆಯಾದ ಬೈರೂತ್ ಮೇಲೆ ಕ್ಷಿಪಣಿ ದಾಳಿ ನಡೆಸಿ ಇಸ್ರೇಲ್ ಹತ್ಯೆಗೈದ ಬೆನ್ನಿಗೇ ಹನಿಯೆಹ್ ಅವರನ್ನು ಹತ್ಯೆಗೈಯ್ಯಲಾಗಿದೆ.
ಮಂಗಳವಾರ ನಡೆದ ಇರಾನಿನ ನೂತನ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ಹನಿಯೆಹ್ ಟೆಹ್ರಾನ್ ಗೆ ತೆರಳಿದ್ದರು.
ಈ ನಡುವೆ, ವಿದೇಶ ಮಾಧ್ಯಮಗಳಲ್ಲಿನ ವರದಿಗಳ ಕುರಿತು ಪ್ರತಿಕ್ರಿಯಿಸಲು ಇಸ್ರೇಲ್ ಸೇನೆ ನಿರಾಕರಿಸಿದೆ.