ವೆನೆಝುವೆಲಾ : ಮಡುರೋ ಗೆಲುವನ್ನು ಒಪ್ಪಲು ಅಮೆರಿಕ ನಕಾರ

Update: 2024-08-02 17:56 GMT

ಕಾರಾಕಾಸ್ : ವೆನೆಝುವೆಲಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ಅಭ್ಯರ್ಥಿ ಎಡ್ಮುಂಡೊ ಗೊನ್ಝಾಲೆಜ್ ಅವರನ್ನು ವಿಜೇತ ಅಭ್ಯರ್ಥಿಯೆಂದು ಅಮೆರಿಕ ಗುರುವಾರ ಮಾನ್ಯತೆ ನೀಡಿದೆ.

ವಾಶಿಂಗ್ಟನ್‌ನ ಈ ನಡೆಯಿಂದಾಗಿ ವೆನೆಝುವೆಲಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ನಿಕೊಲಾಸ್ ಮಡುರೋ ಅವರು ವಿಜಯಗಳಿಸಿದ್ದಾರೆಂದು ಘೋಷಿಸಿದ್ದ ವೆನಝುವಾ ಚುನಾವಣಾ ಪ್ರಾಧಿಕಾರವನ್ನು ಇರಿಸುಮುರಿಸುಗೊಳಿಸಿದೆ.

ಅಧ್ಯಕ್ಷ ಮಡುರೋ ಅವರಿಗೆ ಆಪ್ತವಾಗಿರುವ ನಾಯಕರು ಸೇರಿದಂತೆ ವಿವಿಧ ಸರಕಾರಗಳು, ಅಧ್ಯಕ್ಷೀಯ ಚುನಾವಣೆಯ ಮತ ಏಣಿಕೆಯ ವಿಸ್ತೃತ ವಿವರಗಳನ್ನು ಪ್ರಕಟಿಸುವಂತೆ ವೆನೆಝುವೆಲಾ ರಾಷ್ಟ್ರೀಯ ಚುನಾವಣಾ ಮಂಡಳಿಗೆ ಕರೆ ನೀಡಿದ ಬೆನ್ನಲ್ಲೇ ಅಮೆರಿಕ ಈ ಘೋಷಣೆಯನ್ನು ಮಾಡಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಮಡುರೋ ಅವರು ಜಯಗಳಿಸಿದ್ದಾರೆಂದು ವೆನೆಝುವೆಲಾದ ರಾಷ್ಟ್ರೀಯ ಚುನಾವಣಾ ಮಂಡಳಿಯು ಸೋಮವಾರ ಘೋಷಿಸಿತ್ತು. ಆದರೆ ಈ ಫಲಿತಾಂಶವನ್ನು ಮಾನ್ಯಮಾಡಲು ಪ್ರತಿಪಕ್ಷಗಳ ಮೈತ್ರಿಕೂಟವು ನಿರಾಕರಿಸಿತ್ತು. ಇಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಮುದ್ರಿತವಾದ ಮತಪತ್ರಗಳು ವ್ಯತಿರಿಕ್ತ ಫಲಿತಾಂಶವನ್ನು ತೋರಿಸುತ್ತಿದ್ದು, ಈ ಕುರಿತ ಪುರಾವೆಯನ್ನು ತಾನು ಹೊಂದಿರುವುದಾಗಿ ಅದು ಹೇಳಿತ್ತು.

ಜುಲೈ 28ರಂದು ನಡೆದ ವೆನೆಝುವೆಲಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡ್ಮುಂಡೊ ಗೊನ್ಝಾಲೆಝ್ ಉರುಟಿಯಾ ಅವರು ವಿಜಯಗಳಿಸಿರುವುದು ತನಗೆ ದೊರೆತ ಪುರಾವೆಗಳಿಂದ ಅಮೆರಿಕಕ್ಕೆ ಸ್ಪಷ್ಟವಾಗಿದೆಯೆಂದು, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ತಿಳಿಸಿದ್ದಾರೆ.

ಅಮೆರಿಕದ ನಡೆಯನ್ನು ವೆನೆಝುವೆಲಾ ಅಧ್ಯಕ್ಷ ಮಡುರೋ ಅವರು ತೀವ್ರವಾಗಿ ಖಂಡಿಸಿದ್ದಾರೆ. ಅಮೆರಿಕವು ವೆನೆಝುವೆಲಾದ ವಿಷಯಗಳಲ್ಲಿ ಮೂಗು ತೂರಿಸಬಾರದು ಎಂದವರು ಆಕ್ರೋಶ ವ್ಯಕ್ತಡಡಿಸಿದ್ದಾರೆ.

ಈ ಮಧ್ಯೆ ರವಿವಾರ ನಡೆದ ಮತದಾನದ ಟ್ಯಾಲಿಶೀಟ್‌ಗಳನ್ನು ತೋರಿಸುವಂತೆ ಹಾಗೂ ಅವುಗಳ ನಿಷ್ಪಕ್ಷಪಾತ ದೃಢೀಕರಣಕ್ಕೆ ಅವಕಾಶ ನೀಡುವಂತೆ ಮಡುರೋ ಅವರನ್ನು ನೆರೆಹೊರೆಯ ರಾಷ್ಟ್ರಗಳಾದ ಬ್ರೆಝಿಲ್, ಕೊಲಂಬಿಯಾ ಹಾಗೂ ಮೆಕ್ಸಿಕೊ ಆಗ್ರಹಿಸಿವೆ ಆದರೆ ವೆನೆಝುವೆಲಾ ಈ ಬಗ್ಗೆ ಯಾವುದೇ ವಿವರಗಳನ್ನು ಒದಗಿಸಿಲ್ಲವೆಂದು ತಿಳಿದುಬಂದಿದೆ.

► ಪ್ರತಿಪಕ್ಷ ನಾಯಕಿಯ ಕಾರ್ಯಾಲಯಕ್ಕೆ ನುಗ್ಗಿ ದುಷ್ಕರ್ಮಿಗಳ ದಾಂಧಲೆ

ವೆನೆಝುವೆಲಾದ ವಿವಾದಿತ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಅದ್ಯಕ್ಷ ನಿಕೋಲಾಸ್ ಮಡುರೊ ಅವರ ವಿರೋಧಿಗಳ ವಿರುದ್ಧ ಹಿಂಸಾತ್ಮಕ ದಾಳಿಗಳು ನಡೆದಿರುವ ಬಗ್ಗೆ ವರದಿಯಾಗಿದೆ. ವೆನೆಝುವೆಲಾದ ಪ್ರತಿಪಕ್ಷ ನಾಯಕಿ ಮಾರಿಯಾ ಕೊರಿನಾ ಮಛಾದೊ ಅವರ ಮುಖ್ಯ ಕಾರ್ಯಾಲಯದ ಮೇಲೆ ಆರು ಮಂದಿ ದುಷ್ಕರ್ಮಿಗಳು ನುಗ್ಗಿ ದಾಂಧಲೆ ನಡೆಸಿದ್ದಾರೆ.

ಕಚೇರಿಯ ಬಾಗಿಲುಗಳನ್ನು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಅಮೂಲ್ಯದಾಖಲೆಗಳು ಹಾಗೂ ಸಲಕರಣೆಗಳಿಗೆ ಹಾನಿಯೆಸಗಿದ್ದಾರೆ. ಕಚೇರಿಯ ಗೋಡೆಗಳಿಗೆ ಕಪ್ಪುಬಣ್ಣದ ಪೇಂಟ್‌ನಿಂದ ಸ್ಪ್ರೇ ಮಾಡಿರುವ ಛಾಯಾಚಿತ್ರಗಳನ್ನು ಮಚಾದೋ ಅವರ ಪಕ್ಷದ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News