ಇರಾನ್ | ಗುಪ್ತಚರ, ಮಿಲಿಟರಿ ಅಧಿಕಾರಿಗಳ ಬಂಧನ
ಟೆಹ್ರಾನ್ : ಟೆಹ್ರಾನ್‍ನಲ್ಲಿ ಹಮಾಸ್ ನಾಯಕ ಇಸ್ಮಾಯೀಲ್ ಹಾನಿಯೆಹ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯನ್ನು ಚುರುಕುಗೊಳಿಸಿರುವ ಇರಾನ್ , ಉನ್ನತ ಸೇನಾಧಿಕಾರಿಗಳು, ಗುಪ್ತಚರ ಅಧಿಕಾರಿಗಳ ಸಹಿತ 20ಕ್ಕೂ ಅಧಿಕ ಜನರನ್ನು ಬಂಧಿಸಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಟೆಹ್ರಾನ್‍ನಲ್ಲಿ ಹಾನಿಯೆಹ್ ತಂಗಿದ್ದ ಮನೆಯಲ್ಲಿ ಸ್ಫೋಟಕಗಳನ್ನು ಇಡಲು ಇರಾನ್‍ನ ಭದ್ರತಾ ಏಜೆಂಟರನ್ನು ಇಸ್ರೇಲ್‍ನ ಗುಪ್ತಚರ ಇಲಾಖೆ ಮೊಸಾದ್ ಬಳಸಿಕೊಂಡಿದೆ. ಮೊಸಾದ್‍ನ ಪರವಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಏಜೆಂಟರು ಹಾನಿಯೆಹ್ ತಂಗಿದ್ದ ಮನೆಯ 3 ಪ್ರತ್ಯೇಕ ಕೋಣೆಗಳಲ್ಲಿ ಸ್ಫೋಟಕ ಇರಿಸಿದ್ದರು. ಇರಾನ್ ಆಡಳಿತ ತನ್ನ ತಾಯ್ನಾಡನ್ನು ಅಥವಾ ಮಿತ್ರರನ್ನು ರಕ್ಷಿಸಲು ಸಾಧ್ಯವಿಲ್ಲ ಎಂಬ ಗ್ರಹಿಕೆಯು ಇರಾನ್ ಆಡಳಿತಕ್ಕೆ ಮಾರಕವಾಗಬಹುದು. ಆದ್ದರಿಂದ ಇದನ್ನು ಒಪ್ಪಿಕೊಳ್ಳಲು ಇರಾನ್ ಸರಕಾರ ಸಿದ್ಧವಿಲ್ಲ ಎಂದು ವರದಿ ಹೇಳಿದೆ.
ಹತ್ಯೆಯ ಬಳಿಕ ಇರಾನ್‍ನ ಭದ್ರತಾ ಪಡೆಗಳು ಹಾನಿಯೆಹ್ ತಂಗಿದ್ದ ಅತಿಥಿ ಗೃಹವನ್ನು ಕೂಲಂಕುಷ ಶೋಧಿಸಿದ್ದು ಸಿಬ್ಬಂದಿಗಳನ್ನು ಬಂಧಿಸಿ ಇಲೆಕ್ಟ್ರಾನಿಕ್ಸ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಮುಂದುವರಿದಿದೆ. ರಾಜಧಾನಿ ಟೆಹ್ರಾನ್‍ನ ಭದ್ರತೆಯ ಹೊಣೆ ವಹಿಸಿರುವ ಹಿರಿಯ ಸೇನಾಧಿಕಾರಿಗಳು, ಉನ್ನತ ಗುಪ್ತಚರ ಅಧಿಕಾರಿಗಳನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿ ಹೇಳಿದೆ.
ಈ ಮಧ್ಯೆ, ಕಳೆದ ಮೇ ತಿಂಗಳಿನಲ್ಲೇ ಹಾನಿಯೆಹ್ ಹತ್ಯೆಗೆ ಮೊಸಾದ್ ಯೋಜನೆ ರೂಪಿಸಿತ್ತು. ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದ ಅಧ್ಯಕ್ಷ ಇಬ್ರಾಹಿಂ ರೈಸಿಯ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಾನಿಯೆಹ್ ಟೆಹ್ರಾನ್‍ನಲ್ಲಿದ್ದರು. ಆದರೆ ಆಗ ತುಂಬಾ ಜನಸಂದಣಿ ಇದ್ದ ಕಾರಣ ಈ ಯೋಜನೆ ವಿಫಲಗೊಳ್ಳುವ ಸಾಧ್ಯತೆ ಹೆಚ್ಚಿತ್ತು. ಆದ್ದರಿಂದ ಯೋಜನೆ ಕಾರ್ಯಗತವಾಗಿಲ್ಲ ಎಂದು `ದಿ ಟೆಲಿಗ್ರಾಫ್' ವರದಿ ಮಾಡಿದೆ.