ಉಕ್ರೇನ್ ನೊಂದಿಗೆ ಪರೋಕ್ಷ ಮಾತುಕತೆಯ ವರದಿಗಳನ್ನು ಅಲ್ಲಗಳೆದ ರಶ್ಯ

Update: 2024-08-18 14:23 GMT

ರಶ್ಯ ಅಧ್ಯಕ್ಷ ಪುಟಿನ್‌ (PTI)

ಮಾಸ್ಕೊ: ಕುರ್ಸ್ಕ್ ಮೇಲೆ ನಡೆದಿರುವ ಉಕ್ರೇನ್ ದಾಳಿಯ ಕಾರಣಕ್ಕೆ ಇಂಧನ ಮತ್ತು ವಿದ್ಯುಚ್ಛಕ್ತಿ ಘಟಕಗಳನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿಯನ್ನು ಸ್ಥಗಿತಗೊಳಿಸುವಂತೆ ನಡೆಯುತ್ತಿದ್ದ ಕ್ವೀವ್ ನೊಂದಿಗೆ ಮಾತುಕತೆ ಅರ್ಧದಲ್ಲೇ ಹಳಿ ತಪ್ಪಿದೆ ಎಂಬ ಮಾಧ್ಯಮ ವರದಿಯನ್ನು ರವಿವಾರ ಅಲ್ಲಗಳೆದಿರುವ ರಶ್ಯ, ನಾಗರಿಕ ಮೂಲಭೂತ ಸೌಕರ್ಯಗಳ ಕುರಿತು ಕ್ವೀವ್ ನೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.

ಉಕ್ರೇನ್ ಮತ್ತು ರಶ್ಯದಲ್ಲಿನ ಇಂಧನ ಹಾಗೂ ವಿದ್ಯುಚ್ಛಕ್ತಿ ಘಟಕಗಳ ಮೇಲೆ ಪರಸ್ಪರರು ದಾಳಿ ನಡೆಸದಂತೆ ಒಪ್ಪಂದಕ್ಕೆ ಬರಲು ಈ ತಿಂಗಳು ಖತರ್ ಗೆ ಉಕ್ರೇನ್ ಮತ್ತು ರಶ್ಯ ನಿಯೋಗಗಳನ್ನು ರವಾನಿಸಲಾಗುತ್ತದೆ ಎಂದು ಶನಿವಾರ The Washington Post ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ಈ ಒಪ್ಪಂದದಿಂದ ಭಾಗಶಃ ಕದನ ವಿರಾಮ ಘೋಷಣೆಯಾಗುತ್ತಿತ್ತಾದರೂ, ರಶ್ಯಾದ ಸಾರ್ವಭೌಮ ಪ್ರಾಂತ್ಯದ ಮೇಲೆ ಉಕ್ರೇನ್ ದಾಳಿ ನಡೆಸಿದ್ದರಿಂದ ಈ ಮಾತುಕತೆಗಳು ಹಳಿ ತಪ್ಪಿವೆ ಎಂದು The Washington Post ವರದಿ ಮಾಡಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ರಶ್ಯದ ವಿದೇಶಾಂತ ವ್ಯವಹಾರಗಳ ಸಚಿವಾಲಯದ ವಕ್ತಾರೆ ಮರಿಯ ಝಖರೋವಾ, “ಮುರಿದು ಹಾಕಲು ಏನೂ ಇಲ್ಲದೆ ಇರುವಾಗ, ಯಾವುದೂ ಮುರಿದು ಬಿದ್ದಿಲ್ಲ” ಎಂದು The Washington Post ವರದಿಗೆ ತೀಕ್ಷ್ಣ ಪ್ರತ್ಯುತ್ತರ ನೀಡಿದ್ದಾರೆ.

“ಮಹತ್ವದ ನಾಗರಿಕ ಮೂಲಭೂತ ಸೌಕರ್ಯಗಳ ಸುರಕ್ಷತೆ ಕುರಿತಂತೆ ರಶ್ಯ ಮತ್ತು ಉಕ್ರೇನ್ ಆಡಳಿತದ ನಡುವೆ ಯಾವುದೇ ಪ್ರತ್ಯಕ್ಷ ಅಥವಾ ಪರೋಕ್ಷ ಮಾತುಕತೆಗಳು ನಡೆದಿಲ್ಲ” ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಉಕ್ರೇನ್ ಸರಕಾರ ತಕ್ಷಣವೇ ಪ್ರತಿಕ್ರಿಯೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News