ಲಾವೋಸ್ | ಸೈಬರ್ ಅಪರಾಧ ಕೇಂದ್ರದಲ್ಲಿ ಸಿಲುಕಿದ್ದ ಭಾರತೀಯರ ರಕ್ಷಣೆ

Update: 2024-09-01 16:07 GMT

PC : X/@IndianEmbLaos

ವಿಯೆಂಟಿಯಾನ್ : ಲಾವೋಸ್‍ನಲ್ಲಿ ಸೈಬರ್ ಅಪರಾಧ ಕೇಂದ್ರಗಳಲ್ಲಿ ಸಿಲುಕಿದ್ದ ಕನಿಷ್ಠ 47 ಭಾರತೀಯರನ್ನು ಬೊಕಿಯೊ ಪ್ರಾಂತದಿಂದ ರಕ್ಷಿಸಲಾಗಿದೆ ಎಂದು ಲಾವೋಸ್‍ನಲ್ಲಿನ ಭಾರತೀಯ ರಾಯಭಾರ ಕಚೇರಿ ಹೇಳಿದೆ.

ಲಾವೋಸ್‍ನಲ್ಲಿ ನಕಲಿ ಉದ್ಯೋಗ ಆಮಿಷಕ್ಕೆ ಬಲಿಯಾಗದಂತೆ ಭಾರತದ ಅಧಿಕಾರಿಗಳು ಪ್ರಜೆಗಳಿಗೆ ಎಚ್ಚರಿಕೆ ನೀಡಿದ್ದು ಮೋಸ ಹೋಗುವುದನ್ನು ತಪ್ಪಿಸಲು ಕೂಲಂಕುಷವಾಗಿ ನಿಗಾ ವಹಿಸುವಂತೆ ಆಗ್ರಹಿಸಿದೆ. ಲಾವೋಸ್ ದೇಶದಿಂದ ಇದುವರೆಗೆ ಉದ್ಯೋಗ ವಂಚನೆ ಜಾಲದಿಂದ 635 ಭಾರತೀಯರನ್ನು ಭಾರತೀಯ ನಿಯೋಗ ರಕ್ಷಿಸಿದ್ದು ಅವರು ಸುರಕ್ಷಿತವಾಗಿ ಭಾರತಕ್ಕೆ ಮರಳಲು ಕ್ರಮ ಕೈಗೊಂಡಿದೆ.

ಇತ್ತೀಚಿನ ಪ್ರಕರಣದಲ್ಲಿ ಬೊಕಿಯೊ ಪ್ರಾಂತದ ಗೋಲ್ಡನ್ ಟ್ರಯಾಂಗಲ್ ವಿಶೇಷ ಆರ್ಥಿಕ ವಲಯದಲ್ಲಿರುವ ಸೈಬರ್ ವಂಚನಾ ಕೇಂದ್ರದಲ್ಲಿ ಸಿಲುಕಿಬಿದ್ದಿದ್ದ 47 ಭಾರತೀಯರನ್ನು ರಕ್ಷಿಸಲಾಗಿದೆ. ಇವರಲ್ಲಿ 29 ಮಂದಿ ಸೈಬರ್ ವಂಚನಾ ಕೇಂದ್ರದ ಮೇಲೆ ಲಾವೋಸ್ ಅಧಿಕಾರಿಗಳು ದಾಳಿ ನಡೆಸಿದಾಗ ಸಿಕ್ಕಿಬಿದ್ದ ಬಳಿಕ ಭಾರತೀಯ ರಾಯಭಾರ ಕಚೇರಿಗೆ ಹಸ್ತಾಂತರಿಸಲ್ಪಟ್ಟಿದ್ದರೆ, ಸಂಕಷ್ಟದಲ್ಲಿದ್ದ ಇತರ 18 ಮಂದಿ ನೆರವು ಯಾಚಿಸಿ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದರು. ಇವರನ್ನು ಕರೆತರಲಯ ರಾಯಭಾರ ಕಚೇರಿ ಸಿಬ್ಬಂದು ಬೊಕಿಯೊಗೆ ಧಾವಿಸಿದ್ದರು ಎಂದು ಹೇಳಿಕೆ ತಿಳಿಸಿದೆ.

ರಕ್ಷಿಸಲ್ಪಟ್ಟ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಸ್ಥಳಾಂತರಿಸಲು ಅಗತ್ಯವಿರುವ ಎಲ್ಲಾ ಕಾರ್ಯವಿಧಾನಗಳನ್ನೂ ರಾಯಭಾರ ಕಚೇರಿ ಪೂರ್ಣಗೊಳಿಸಿದೆ. ಇವರಲ್ಲಿ 30 ಮಂದಿ ಈಗಾಗಲೇ ಭಾರತಕ್ಕೆ ಮರಳಿದ್ದಾರೆ ಅಥವಾ ಮರಳುತ್ತಿದ್ದಾರೆ. ಉಳಿದ 17 ಮಂದಿ ಪ್ರಯಾಣ ವ್ಯವಸ್ಥೆ ಪೂರ್ಣಗೊಳ್ಳಲು ಕಾಯುತ್ತಿದ್ದು ಶೀಘ್ರವೇ ಭಾರತ ತಲುಪಲಿದ್ದಾರೆ. ಭಾರತೀಯರ ಸುರಕ್ಷೆ ಮತ್ತು ಯೋಗಕ್ಷೇಮ ಖಾತರಿಪಡಿಸುವುದು ನಮ್ಮ ಪ್ರಧಾನ ಆದ್ಯತೆಯಾಗಿದೆ ಎಂದು ಲಾವೋಸ್‍ಗೆ ಭಾರತದ ರಾಯಭಾರಿ ಪ್ರಷಾಂತ್ ಅಗರ್‍ವಾಲ್ ಹೇಳಿದ್ದಾರೆ.

ಕಳೆದ ತಿಂಗಳು ಲಾವೋಸ್‍ಗೆ ಭೇಟಿ ನೀಡಿದ್ದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾರತೀಯರ ಕಳ್ಳಸಾಗಣೆ ಬಗ್ಗೆ ಲಾವೋಸ್ ಪ್ರಧಾನಿ ಸೊನೆಕ್ಸಾರ್ ಸಿಫಾಂಡೋನ್ ಜತೆ ಚರ್ಚಿಸಿದ್ದರು. ಕಳೆದ ತಿಂಗಳು ಲಾವೋಸ್‍ನ ವಿವಿಧ ಸೈಬರ್ ವಂಚನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ 13 ಭಾರತೀಯರನ್ನು ರಕ್ಷಿಸಿ ಭಾರತಕ್ಕೆ ವಾಪಾಸು ಕಳುಹಿಸಲಾಗಿದೆ. ಅನೈತಿಕ, ಅಪ್ರಾಮಾಣಿಕ ಕಾರ್ಯ ನಡೆಸುತ್ತಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತೀಯ ರಾಯಭಾರ ಕಚೇರಿ ಲಾವೋಸ್ ಸರಕಾರವನ್ನು ಆಗ್ರಹಿಸಿದೆ.

ಲಾವೋಸ್, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‍ನ ಸಂಗಮದಲ್ಲಿರುವ ಗೋಲ್ಡನ್ ಟ್ರಯಾಂಗಲ್ ವಿಶೇಷ ಆರ್ಥಿಕ ವಲಯ ಅಕ್ರಮ ಕಾರ್ಯಾಚರಣೆಗಳಿಗೆ ಹಾಟ್‍ಸ್ಪಾಟ್ ಆಗಿದೆ. ಪ್ರದೇಶದ ಸಂಕೀರ್ಣ ಭೌಗೋಳಿಕತೆ ಮತ್ತು ದುರ್ಬಲ ಗಡಿಭಾಗಗಳು ಕ್ರಿಮಿನಲ್ ಜಾಲಗಳಿಗೆ ನಿರ್ಭಯದಿಂದ ಕಾರ್ಯ ನಿರ್ವಹಿಸಲು ಸೂಕ್ತ ಸ್ಥಳವಾಗಿದೆ. ಲಾವೋಸ್ ಅಥವಾ ಆಗ್ನೇಯ ಏಶ್ಯಾದ ಇತರ ದೇಶಗಳಿಂದ ಉದ್ಯೋಗದ ಭರವಸೆಯನ್ನು ಒಪ್ಪಿಕೊಳ್ಳುವ ಮುನ್ನ ಗರಿಷ್ಠ ಜಾಗರೂಕತೆ ವಹಿಸುವಂತೆ ಭಾರತ ಸರಕಾರ ಎಲ್ಲಾ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ. ಯಾವುದೇ ಸಂದೇಹವಿದ್ದರೆ ತಕ್ಷಣ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಬೇಕು. ಆನ್‍ಲೈನ್‍ನಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ವೈಯಕ್ತಿಕ ಅಥವಾ ಆರ್ಥಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು. ವಿದೇಶದಲ್ಲಿದ್ದಾಗ ಕುಟುಂಬದ ಸದಸ್ಯರು ಅಥವಾ ಸ್ನೇಹಿತರೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬೇಕು ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಭಾರತೀಯ ರಾಯಭಾರ ಕಚೇರಿಗೆ ವರದಿ ಮಾಡುವಂತೆ ಸಲಹೆ ನೀಡಿದೆ.

► ಆಕರ್ಷಕ ಉದ್ಯೋಗದ ಆಮಿಷ

ಭಾರತೀಯರನ್ನು ಆಕರ್ಷಕ, ಭಾರೀ ವೇತನದ ಉದ್ಯೋಗದಲ್ಲಿ ನೇಮಕಾತಿ ಮಾಡಿಕೊಳ್ಳುವ ಆಮಿಷ ಒಡ್ಡುವ ಲಾವೋಸ್ ಸೈಬರ್ ವಂಚಕರ ಜಾಲವು, ಅಲ್ಲಿಗೆ ತಲುಪಿದ ಬಳಿಕ ಭಾರತೀಯರನ್ನು ಬಲವಂತವಾಗಿ ಸೈಬರ್ ವಂಚನಾ ಕಾರ್ಯಾಚರಣೆಗಳಿಗೆ ಸೇರ್ಪಡೆಗೊಳಿಸುತ್ತದೆ. ತಮಗೆ ನಿಗದಿಪಡಿಸಿದ ದೈನಂದಿನ ಗುರಿಗಳನ್ನು (ಟಾರ್ಗೆಟ್) ಈಡೇರಿಸಲು ವಿಫಲವಾದರೆ ಆಹಾರ, ವಿಶ್ರಾಂತಿಯನ್ನೂ ನಿರಾಕರಿಸಲಾಗುತ್ತಿತ್ತು. ಮಾನಸಿಕ ಮತ್ತು ದೈಹಿಕ ಒತ್ತಡ, ಬೆದರಿಕೆ ಮೂಲಕ ದೀರ್ಘಕಾಲ ಕೆಲಸ ಮಾಡಲು ಬಲವಂತಪಡಿಸಲಾಗುತ್ತಿದೆ ಎಂದು ರಕ್ಷಿಸಲ್ಪಟ್ಟವರು ಹೇಳಿದ್ದಾರೆ.

ಸಾಮಾನ್ಯವಾಗಿ ಡೇಟಿಂಗ್ ಆ್ಯಪ್‍ಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಕಾರ್ಯಾಚರಿಸುವ ವಂಚಕರು, ಬಲಿಪಶುಗಳನ್ನು ಗುರುತಿಸಿ ಮೋಸದ ಕ್ರಿಪ್ಟೊಕರೆನ್ಸಿ ಯೋಜನೆಗಳನ್ನು ಹೂಡಿಕೆ ಮಾಡಲು ಮಹಿಳೆಯರ ಮೂಲಕ ಆಮಿಷ ಒಡ್ಡುತ್ತಾರೆ

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News