ಗಾಝಾದಲ್ಲಿ ಕದನವಿರಾಮ ಜಾರಿಯಾಗದೆ ಕೈದಿಗಳ ವಿನಿಮಯ ಸಾಧ್ಯವಿಲ್ಲ: ಹಮಾಸ್
ಗಾಝಾ: ಗಾಝಾದಲ್ಲಿ ಕದನ ವಿರಾಮ ಜಾರಿಗೊಳ್ಳದೆ ಒತ್ತೆಯಾಳು-ಕೈದಿಗಳ ವಿನಿಮಯ ಸಾಧ್ಯವಿಲ್ಲ ಎಂದು ಹಮಾಸ್ ಉಪಮುಖ್ಯಸ್ಥ ಸಲೇಹ್ ಅಲ್-ಅರೌರಿಯನ್ನು ಉಲ್ಲೇಖಿಸಿ ಅಲ್‌ಜಝೀರಾ ವರದಿ ಮಾಡಿದೆ.
ಇಸ್ರೇಲಿ ಯೋಧರು ಮತ್ತು ಇಸ್ರೇಲ್ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದ ಇಸ್ರೇಲ್ ನಾಗರಿಕರು ಇನ್ನೂ ಒತ್ತೆಯಾಳುಗಳಾಗಿದ್ದಾರೆ. ಗಾಝಾದಲ್ಲಿ ಕದನ ವಿರಾಮ ಜಾರಿಯಾಗದೆ ಮತ್ತು ಎಲ್ಲಾ ಫೆಲೆಸ್ತೀನಿಯನ್ ಕೈದಿಗಳು ಬಿಡುಗಡೆಗೊಳ್ಳದೆ ಇವರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಯುದ್ಧ ಅದರದ್ದೇ ದಿಕ್ಕಿನಲ್ಲಿ ಸಾಗಲಿ. ಈ ನಿರ್ಧಾರ ಅಂತಿಮ. ನಾವು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದವರು ಹೇಳಿದ್ದಾರೆ.
ಈ ಮಧ್ಯೆ, ರವಿವಾರ ಉತ್ತರ ಗಾಝಾದ ಹಮಾಸ್ ನೆಲೆಯನ್ನು ಗುರಿಯಾಗಿಸಿ ಇಸ್ರೇಲ್ ವಾಯುಪಡೆ ಹಾಗೂ ಫಿರಂಗಿ ದಳ ಬೃಹತ್ ದಾಳಿ ನಡೆಸಿದೆ. ಗಾಝಾದಿಂದ ಇಸ್ರೇಲ್ ಪ್ರದೇಶದತ್ತ ಹಾರಿಬಿಡಲಾದ ರಾಕೆಟ್‌ಗಳನ್ನು ಇಸ್ರೇಲ್ ವಾಯುರಕ್ಷಣಾ ವ್ಯವಸ್ಥೆ ತುಂಡರಿಸಿದೆ. ಗಾಝಾದ ಮೇಲೆ ನಡೆಸಿದ ಡ್ರೋನ್ ದಾಳಿಯಲ್ಲಿ ಹಮಾಸ್‌ನ ಐವರು ಸದಸ್ಯರು ಮೃತಪಟ್ಟಿದ್ದಾರೆ. ಯುದ್ಧವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳು ಹಮಾಸ್‌ನ ರಹಸ್ಯ ಕಾರ್ಯಾಚರಣೆ ಕೇಂದ್ರ ಹಾಗೂ ಶಸ್ತ್ರಾಸ್ತ್ರ ಸಂಗ್ರಹ ವ್ಯವಸ್ಥೆಯನ್ನು ನಾಶಗೊಳಿಸಿವೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಶುಕ್ರವಾರ ಕದನ ವಿರಾಮ ಅಂತ್ಯಗೊಂಡ ಬಳಿಕ ಇಸ್ರೇಲ್‌ನ ದಾಳಿಯಿಂದ ಕನಿಷ್ಟ 240 ಫೆಲೆಸ್ತೀನೀಯರು ಮೃತಪಟ್ಟಿರುವುದಾಗಿ ಗಾಝಾದ ಆರೋಗ್ಯ ಸಚಿವಾಲಯ ಹೇಳಿದೆ. ಶನಿವಾರ ಉತ್ತರ ಗಾಝಾದಲ್ಲಿನ ಜಬಾಲ ನಿರಾಶ್ರಿತರ ಶಿಬಿರದ ಪ್ರದೇಶದಲ್ಲಿನ 6 ಮಹಡಿಯ ಕಟ್ಟಡದ ಮೇಲೆ ಮತ್ತು ಪಕ್ಕದಲ್ಲಿರುವ ಗಾಝಾ ನಗರದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಟ 160 ಫೆಲೆಸ್ತೀನೀಯರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಮಾನವೀಯ ವ್ಯವಹಾರಗಳಿಗೆ ಸಂಬಂಧಿಸಿದ ಸಮಿತಿ ವರದಿ ಮಾಡಿದೆ.