ಪಾಕ್: ಮಾಜಿ ಸಚಿವೆಯ ಪುತ್ರಿ ಬಂಧನ
ಇಸ್ಲಮಾಬಾದ್: ಪಾಕಿಸ್ತಾನದ ಮಾನವ ಹಕ್ಕುಗಳ ಇಲಾಖೆಯ ಮಾಜಿ ಸಚಿವೆ ಶಿರೀನ್ ಮಝಾರಿ ಅವರ ಪುತ್ರಿ ಇಮಾನ್ ಮಝಾರಿಯನ್ನು ರವಿವಾರ ಬೆಳಿಗ್ಗೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಧರಣಿ, ಪ್ರತಿರೋಧದ ಮೂಲಕ ಸರಕಾರದ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸಿರುವುದಕ್ಕೆ ನ್ಯಾಯವಾದಿ, ಕಾರ್ಯಕರ್ತೆ ಇಮಾನ್‍ರ ಬಂಧನವಾಗಿದೆ ಎಂದು ತರ್ನೋಲ್ ಪೊಲೀಸ್ ಠಾಣೆಯ ಸಿಬಂದಿ ಹೇಳಿದ್ದಾರೆ. ಆದರೆ ಸಮವಸ್ತ್ರ ಧರಿಸದ ಕೆಲವ್ಯಕ್ತಿಗಳು ಮನೆಯ ಮುಂಬಾಗಿಲನ್ನು ಒಡೆದು ತನ್ನ ಪುತ್ರಿಯನ್ನು ಅಪಹರಿಸಿದ್ದಾರೆ ಎಂದು ಶಿರೀಮ ಮಝಾರಿ ಆರೋಪಿಸಿದ್ದಾರೆ.
ಮೇ 10ರಂದು ಪಾಕಿಸ್ತಾನದಲ್ಲಿ ನಡೆದ ಗಲಭೆಯ ಹಿನ್ನೆಲೆಯಲ್ಲಿ ಬಂಧನದಲ್ಲಿರುವ ಶಿರೀನ್, ಇಮ್ರಾನ್‍ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದಾರೆ. `ಪುತ್ರಿಯನ್ನು ಅಪಹರಿಸಿದ ಜತೆಗೆ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾ, ಲ್ಯಾಪ್‍ಟಾಪ್ ಹಾಗೂ ಮೊಬೈಲ್ ಅನ್ನೂ ಕೊಂಡೊಯ್ದಿದ್ದಾರೆ. ಮನೆಗೆ ನುಗ್ಗಿದವರು ನೈಟ್‍ಡ್ರೆಸ್‍ನಲ್ಲಿದ್ದ ಇಮಾನ್‍ಗೆ ಬಟ್ಟೆ ಬದಲಿಸಲೂ ಅವಕಾಶ ನೀಡದೆ ಎಳೆದೊಯ್ದಿದ್ದಾರೆ. ಯಾವುದೇ ವಾರಂಟ್ ಅಥವಾ ಕಾನೂನು ಪ್ರಕ್ರಿಯೆ ನಡೆಸಿಲ್ಲ' ಎಂದು ಶಿರೀನ್ ಟ್ವೀಟ್ ಮಾಡಿದ್ದಾರೆ.
ಇಮಾನ್ ಬಂಧನವನ್ನು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ಖಂಡಿಸಿದ್ದು ಆಕೆಯನ್ನು ಯಾವುದೇ ಷರತ್ತುಗಳಿಲ್ಲದೆ ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದೆ. `ಮನೆಯ ದ್ವಾರವನ್ನು ಒಡೆದು, ಯಾವುದೇ ವಾರಂಟ್‍ಗಳಿಲ್ಲದೆ ಇಮಾನ್‍ರನ್ನು ಬಂಧಿಸಿರುವ ಇಸ್ಲಮಾಬಾದ್ ಪೊಲೀಸರ ಕ್ರಮ ಸ್ವೀಕಾರಾರ್ಹವಲ್ಲ. ಇದು ಜನರ ಹಕ್ಕುಗಳ ಮೇಲಿನ ದಾಳಿಯಾಗಿದೆ' ಕಎಂದು ಮಾನವ ಹಕ್ಕುಗಳ ಆಯೋಗ ಖಂಡಿಸಿದೆ. ಕಳೆದ ವಾರ ಇಮಾನ್ ಇಸ್ಲಮಾಬಾದ್‍ನಲ್ಲಿ ಪಷ್ತೂನ್ ತಹಾಪುಝ್ ಮೂವ್‍ಮೆಂಟ್ ವೇದಿಕೆಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಇಮಾನ್, ರಾಜಕೀಯದಲ್ಲಿ ಸೇನೆಯ ಹಸ್ತಕ್ಷೇಪವನ್ನು ಖಂಡಿಸಿದ್ದರು.