ಪಾಕಿಸ್ತಾನ: ಬಂಧನದಲ್ಲಿದ್ದ ಭಾರತೀಯ ಮೀನುಗಾರ ಜೈಲಿನಲ್ಲಿ ನೇಣಿಗೆ ಶರಣು

ಕರಾಚಿ: ಪಾಕಿಸ್ತಾನದ ಕರಾಚಿಯ ಜೈಲಿನಲ್ಲಿ 2022ರಿಂದಲೂ ಬಂಧನದಲ್ಲಿದ್ದ ಭಾರತೀಯ ಮೀನುಗಾರ ಜೈಲಿನಲ್ಲಿಯೇ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದಾಗಿ ಜೈಲು ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಕೈದಿಯನ್ನು ಗೌರವ್ ರಾಮ್ ಆನಂದ್ (52) ವರ್ಷ ಎಂದು ಗುರುತಿಸಲಾಗಿದೆ. ಮಲಿರ್ ಜೈಲಿನಲ್ಲಿ ಬಂಧಿಯಾಗಿದ್ದ ಗೌರವ್ ರಾಮ್ ಜೈಲಿನ ವಾಶ್ರೂಂನಲ್ಲಿ ಹಗ್ಗವನ್ನು ಕುಣಿಕೆಯಾಗಿ ಬಳಸಿ ನೇಣು ಹಾಕಿಕೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಜೈಲಿನಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಕೈದಿಯನ್ನು ಪರೀಕ್ಷಿಸಿ ಆತ ಮೃತಪಟ್ಟಿರುವುದನ್ನು ಘೋಷಿಸಿದ ಬಳಿಕ ಮೃತದೇಹವನ್ನು ವೈದ್ಯಕೀಯ-ಕಾನೂನು ಔಪಚಾರಿಕತೆಗೆ ಜಿನ್ನಾ ಆಸ್ಪತ್ರೆಗೆ ಹಾಗೂ ಸೊಹ್ರಾಬ್ ಗೋಥ್ನಲ್ಲಿನ ಎಡಿಹ್ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ ಎಂದು `ಡಾನ್' ವರದಿ ಮಾಡಿದೆ. ಗೌರವ್ನನ್ನು 2022ರ ಫೆಬ್ರವರಿಯಲ್ಲಿ ಕರಾಚಿಯ ಬಂದರು ಪೊಲೀಸರು ಬಂಧಿಸಿದ್ದು ಮಲಿರ್ ಜೈಲಿನಲ್ಲಿರಿಸಿದ್ದರು. ಪಾಕಿಸ್ತಾನದ ಕಡಲ ವ್ಯಾಪ್ತಿಗೆ ಆಕಸ್ಮಿಕವಾಗಿ ದಾಟಿದ್ದ 22 ಭಾರತೀಯ ಮೀನುಗಾರರನ್ನು ಕಳೆದ ತಿಂಗಳು ಮಲಿರ್ ಜೈಲಿನಿಂದ ಬಿಡುಗಡೆಗೊಳಿಸಲಾಗಿತ್ತು.